ಉಡುಪಿ: ನಗರದ ಕುಕ್ಕುಂದೂರು ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಉತ್ತಮ ಅಂಕ ಪಡೆದು ಉತ್ತಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದರೂ, ಪಿ ಯು ಶಿಕ್ಷಣ ಮಂಡಳಿಯ ಬೇಜವಾಬ್ದಾರಿಯಿಂದ ಕಡಿಮೆ ಅಂಕ ಸಿಗುವ ಮೂಲಕ ಅನ್ಯಾಯಕ್ಕೆ ಒಳಗಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಅರ್ಥಶಾಸ್ತ್ರ ವಿಷಯದಲ್ಲಿ ವಿದ್ಯಾರ್ಥಿನಿಗೆ ಅನ್ಯಾಯ ಐದು ವಿಷಯಗಳಲ್ಲಿ ಒಳ್ಳೆಯ ಅಂಕವನ್ನು ಗಳಿಸಿದ ವಿದ್ಯಾರ್ಥಿನಿ, ಝುಹಾ ಪಿರ್ದೆಶ್ ಗೆ ಅರ್ಥಶಾಸ್ತ್ರ ವಿಷಯದಲ್ಲಿ ಕಡಿಮೆ ಅಂಕ ಬಂದಿದೆ. ಆದರೆ ಅರ್ಥಶಾಸ್ತ್ರ ವಿಭಾಗದಲ್ಲಿ ಉತ್ತಮ ಅಂಕ ಗಳಿಸುವ ವಿಶ್ವಾಸ ಹೊಂದಿದ್ದ ವಿದ್ಯಾರ್ಥಿನಿ, ಈ ಫಲಿತಾಂಶ ನೋಡಿ ಆಘಾತಕ್ಕೆ ಒಳಗಾಗಿದ್ದಳು. ಅರ್ಥಶಾಸ್ತ್ರ ವಿಷಯದ ಉತ್ತರ ಪತ್ರಿಕೆಯ ಪ್ರತಿಯನ್ನು ತಂದೆಯ ಮೂಲಕ ಆನ್ಲೈನ್ ನಲ್ಲಿ ತರಿಸಿಕೊಂಡಾಗ ಅಂಕ ಪಟ್ಟಿಯಲ್ಲಿ ವ್ಯತ್ಯಾಸಗಳಾಗಿರುವುದು ಆಕೆಗೆ ಗೊತ್ತಾಗಿದೆ.
ವಿದ್ಯಾರ್ಥಿನಿ ಉತ್ತರ ಪತ್ರಿಕೆಯಲ್ಲಿನ ಅಂಕ ವಿದ್ಯಾರ್ಥಿನಿ ಝುಹಾ ಪಿರ್ದೇಶ್, ಬರೆದ ಅರ್ಥಶಾಸ್ತ್ರ ವಿಷಯದ ಉತ್ತರ ಪತ್ರಿಕೆಯಲ್ಲಿ ಆಕೆಗೆ 82 ಅಂಕ ದೊರಕಿತ್ತು. ಪರೀಕ್ಷಾ ಮಂಡಳಿಯ ಪ್ರಕಟಿತ ಅಂಕದ ಕಾಲಂನಲ್ಲಿ 82 ರ ಬದಲಿಗೆ 49 ಎಂದು ತಪ್ಪಾಗಿ ಮುದ್ರಿತವಾಗಿತ್ತು. ಅಂಕಗಳನ್ನು ನಮೂದಿಸುವಲ್ಲಿ ಇಲಾಖೆ ತಪ್ಪೆಸಗಿದೆ ಎನ್ನಲಾಗ್ತಿದೆ. ಇಷ್ಟೇ ಅಲ್ಲದೆ, ಹೆಚ್ಚು ಅಂಕ ಸಿಗದಿರುವ ಕುರಿತು ಸಂಶಯಗೊಂಡ ವಿದ್ಯಾರ್ಥಿನಿ ಇದೇ ವಿಷಯದ ಕುರಿತಂತೆ ಉತ್ತರ ಪತ್ರಿಕೆಯನ್ನು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಮಾಧವ ಭಟ್ ಅವರಲ್ಲಿ ಪರಿಶೀಲನೆಗೆ ನೀಡಿದ್ದಳು. ಪರಿಶೀಲಿಸಿದ ಉಪನ್ಯಾಸಕರು ಈಕೆಗೆ ಅಂಕ ಹೆಚ್ಚು ಸಿಗಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಿ ಯು ಶಿಕ್ಷಣ ಮಂಡಳಿ ಪ್ರಕಟಿಸಿದ ಫಲಿತಾಂಶದ ಪ್ರತಿ ಇಲ್ಲೂ ಈಕೆಗೆ ವಂಚನೆಯಾಗಿದೆ, ಆಕೆಯ ಅಂಕ ಪಟ್ಟಿಯಲ್ಲಿ ವ್ಯತ್ಯಾಸವಾಗದೆ ಇದ್ದಿದ್ದರೆ, ಆಕೆ ಕಾಲೇಜಿನ ಫಲಿತಾಂಶ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಮತ್ತು ರ್‍ಯಾಂಕ್ ಸಾಲಿನಲ್ಲಿ 10ನೇ ಶ್ರೇಣಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಳು. ಪಿ ಯು ಬೋರ್ಡ್ ತಪ್ಪಿನಿಂದ ವಿದ್ಯಾರ್ಥಿನಿಗೆ ಈ ಸ್ಥಾನ ಕೈತಪ್ಪಿದೆ.
ಪರೀಕ್ಷಾ ಮಂಡಳಿಯ ಈ ಎರಡು ಎಡವಟ್ಟನಿಂದ ಪ್ರತಿಭಾನ್ವಿತ ಈ ವಿದ್ಯಾರ್ಥಿನಿ ನೊಂದಿದ್ದಾಳೆ. ಈಕೆ ಶಾಲಾ ಬಸ್ ಚಾಲಕರಾಗಿರುವ ಶಬೀರ್ ಅವರ ಪುತ್ರಿಯಾಗಿದ್ದಾಳೆ. ಬೋರ್ಡ್ ಪ್ರಕಟಿಸಿದ ಫಲಿತಾಂಶದಲ್ಲಿ ವ್ಯತ್ಯಾಸಗಳು ಆಗಿವೆ. ಮರುಮೌಲ್ಯ ಮಾಪನ ಮೊರೆ ಹೋಗಲು ವಿದ್ಯಾರ್ಥಿನಿಗೆ ಸಲಹೆ ನೀಡಿದ್ದೇವೆ ಎಂದು ಕಾಲೇಜಿನ ಉಪನ್ಯಾಸಕರು ತಿಳಿಸಿದ್ದಾರೆ. ಇನ್ನಾದರೂ ಪಿಯು ಬೋರ್ಡಿನಿಂದ ನ್ಯಾಯ ಸಿಗುತ್ತಾ ಎಂದು ಕಾದು ನೋಡಬೇಕಿದೆ.