ಉಡುಪಿ: ಜಿಲ್ಲೆಯಲ್ಲಿ ವಕೀಲರೊಬ್ಬರು ಕೊರೊನಾ ಸಂಬಂಧಿಸಿದಂತೆ ತಮ್ಮ ಮನೆ ಮುಂದೆ ಹಾಕಿರುವ ಬೋರ್ಡ್ ಎಲ್ಲರ ಗಮನ ಸೆಳೆಯುತ್ತಿದೆ.
ಎಲ್ಲರ ಗಮನ ಸೆಳೆಯುತ್ತಿದೆ ವಕೀಲರ ಮನೆ ಮುಂದಿನ ಬೋರ್ಡ್...!! ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಅವರವರ ಮನೆಯಲ್ಲೇ ಸುರಕ್ಷಿತವಾಗಿರುವಂತೆ ಆದೇಶಿಸಲಾಗಿದೆ. ಸರ್ಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ವಕೀಲರು ಮನೆ ಮುಂದೆ ವಿಶಿಷ್ಟವಾದ ಬೋರ್ಡ್ ಅಳವಡಿಸಿಕೊಂಡಿದ್ದಾರೆ.
ವಕೀಲರಾದ ಆನಂದ ಮಡಿವಾಳ ಎಂಬುವವರೆ ಸಾಮಾಜಿಕ ಕಾಳಜಿ ಮೆರೆದ ವಕೀಲರು. ಏಪ್ರಿಲ್ 14ರ ವರೆಗೆ ಕಕ್ಷಿದಾರರಾಗಲಿ ಸಂಬಂಧಿಕರಾಗಲೀ ಯಾರಿಗೂ ನನ್ನ ಮನೆಯ ಒಳಗೆ ಪ್ರವೇಶವಿಲ್ಲ ಎಂದು ಸೂಚನಾಫಲಕ ಅಳವಡಿಸಿದ್ದಾರೆ. ಈ ಮೂಲಕ ನಾನಂತೂ ಮನೆಯಲ್ಲಿ ಇರುತ್ತೇನೆ ನೀವು ಕೂಡ ನಿಮ್ಮ ನಿಮ್ಮ ಮನೆಗಳಲ್ಲಿ ಸೇಫ್ ಆಗಿರಿ ಎಂದು ಸಾರಿ ಹೇಳುತ್ತಿದ್ದಾರೆ.
ಅಷ್ಟೇಅಲ್ಲದೇ, ತುರ್ತು ಅಗತ್ಯ ಇದ್ರೆ ಫೋನ್ ಮಾಡಿ ಅಂತ ತನ್ನ ಮೊಬೈಲ್ ಸಂಖ್ಯೆಯನ್ನು ಕೂಡ ಈ ಫಲಕದಲ್ಲಿ ನಮೂದಿಸಿದ್ದಾರೆ. ಕೊರೊನಾ ವೈರಸ್ ಅನ್ನು ಓಡಿಸಲು ಮತ್ತು ಸರಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಲು ನಾವೆಲ್ಲಾ ಪಣ ತೊಡಲೇ ಬೇಕು. ಇದು ಸಾಮಾಜಿಕ ಕಾಳಜಿಯ ಚಿಕ್ಕ ಸಂದೇಶ ಎಂದು ಆನಂದ ಮಡಿವಾಳರು ಹೇಳಿದ್ದಾರೆ.