ಉಡುಪಿ :ಲೋಕಸಭಾ ಸಮರದ ಬಳಿಕ ಟೆನ್ಷನ್ ಕಳೆಯಲು ಪಂಚಕರ್ಮ ಚಿಕಿತ್ಸೆಗೆ ಉಡುಪಿಗೆ ಬಂದಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಟೆನ್ಷನ್ ಕಡಿಮೆಯಾಗಿಲ್ಲ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಗ ನಿಖಿಲ್ ಗೆಲುವಿನ ಆಸೆ ಹೊಂದಿರುವ ಸಿಎಂಗೆ ಆತಂಕಗಳು ಎದುರಾಗುತ್ತಿದೆ. ಅದರಲ್ಲೂ ಸ್ವಪಕ್ಷದ ಜಿ. ಟಿ ದೇವೇಗೌಡ ಹೇಳಿದ ಮಾತು ಸಿಎಂ ಶಾಂತಿಗೆಡಿಸಿರೋದು ಸತ್ಯ.
ಸಿಎಂ ಹೆಚ್‌ಡಿಕೆಗೆ ಟೆನ್ಷನ್ ಮೇಲೆ ಟೆನ್ಷನ್! ವಾರಗಳ ಹಿಂದೆಯಷ್ಟೆ ಉಡುಪಿಯ ಕಾಪು ಸಾಯಿ ರಾಧಾ ಹೆರಿಟೇಜ್‌ನಲ್ಲಿ ಪಂಚಕರ್ಮ ಚಿಕಿತ್ಸೆಗೆ ಬಂದಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ಶ್ರೀಲಂಕಾದಲ್ಲಿ ನಡೆದ ಘಟನೆ ನೆಮ್ಮದಿ ಹಾಳು ಮಾಡಿತ್ತು. ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಜೆಡಿಎಸ್ ಮುಖಂಡರು ಮೃತಪಟ್ಟ ಹಿನ್ನೆಲೆಯಲ್ಲಿ ರಿಲ್ಯಾಕ್ಸ್ಗೆ ಬ್ರೇಕ್ ಹಾಕಿ ಬೆಂಗಳೂರಿಗೆ ಹಿಂದಿರುಗಿದ್ರು. ಇದಾದ ನಾಲ್ಕು ಐದು ದಿನಗಳ ಬಳಿಕ ಮತ್ತೆ ಉಡುಪಿಗೆ ಸಿಎಂ ಕುಮಾರಸ್ವಾಮಿ ಮರಳಿದ್ರು.
ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ಮಗಳ ಮದುವೆ ಕಾರ್ಯಕ್ರಮಕ್ಕೆ ತಂದೆ ದೇವೇಗೌಡರ ಜೊತೆಗೆ ಉಡುಪಿಗೆ ಬಂದಿಳಿದ ಕುಮಾರಸ್ವಾಮಿ ಅವರು ಮದುವೆ ಕಾರ್ಯಕ್ರಮ ಮುಗಿಸಿ ಸೀದಾ ಮತ್ತೆ ಕಾಪು ಸಾಯಿ ರಾಧಾ ರೆಸಾರ್ಟ್ ಹಾದಿ ಹಿಡಿದಿದ್ದರು. ಮಂಡ್ಯ ಲೋಕ ಸಮರದ ತಲೆಬಿಸಿ ಶಾಂತವಾಗಿಸಲು ತಮ್ಮ ತಂದೆಯ ಜೊತೆಯೇ ಆಯಿಲ್ ಬಾತ್, ಸ್ಯಾಂಡ್ ಬಾತ್ ಮೊರೆ ಹೋಗಿದ್ದರು. ಆದರೆ, ಈಗ ಮತ್ತೆ ಸಿಎಂ ಮನಃಶಾಂತಿ ಕೆಡಿಸುವ ಹೇಳಿಕೆ ಮಾಧ್ಯಮದಲ್ಲಿ ಬಂದಿದೆ. ಸ್ವಪಕ್ಷದ ಸಚಿವ ಜಿ ಟಿ ದೇವೇಗೌಡ ಅವರು ಮೈಸೂರುನಲ್ಲಿ, ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವ ಹೇಳಿಕೆ ಸಿಎಂಗೆ ಸಖತ್ ಟೆನ್ಷನ್ ನೀಡಿದೆ.
ಮೊದಲೇ ಮಗನ ಮಂಡ್ಯದ ಭವಿಷ್ಯದ ಬಗ್ಗೆ ಆತಂಕಗೊಂಡಿರುವ ಸಿಎಂಗೆ ಜಿ ಟಿ ದೇವೆಗೌಡ ಅವರ ಈ ಹೇಳಿಕೆ ಮತ್ತಷ್ಟು ಆತಂಕ ನೀಡಿದೆ. ರಿಲ್ಯಾಕ್ಸ್ ಆಗಿ ಚಿಕಿತ್ಸೆ ಪಡೆಯಲು ರೆಸಾರ್ಟ್ ಸೇರಿರುವ ಕುಮಾರಸ್ವಾಮಿ ಯಾವ ರೀತಿ ಆತಂಕ ಗೊಂಡಿದ್ದಾರೆ ಅಂದರೆ ರಾಜ್ಯದ ಎಲ್ಲಾ ಸುದ್ದಿ ವಾಹಿನಿಗಳನ್ನು ಏಕಕಾಲಕ್ಕೆ ನೋಡುವಷ್ಟು ಟೆನ್ಷನ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ರೆಸಾರ್ಟ್‌ನವರ ಮೂಲಕ ಮತ್ತೆ ಮೂರು ಹೊಸ ಟಿವಿಗಳನ್ನು ತರಿಸಿ ಅಳವಡಿಕೊಂಡು ನ್ಯೂಸ್ ನೋಡುತ್ತಿದ್ದಾರೆ.
ಅಷ್ಟೇ ಅಲ್ಲದೆ ರೆಸಾರ್ಟ್‌ನ ಒಳಗಿನ ಚಟುವಟಿಕೆಗಳು ಹೊರಗೆ ಕಾಣಲೇಬಾರದು ಎನ್ನುವ ನಿಟ್ಟಿನಲ್ಲಿ ರೆಸಾರ್ಟ್ ಸುತ್ತಲೂ ಪರದೆಗಳ ಕೋಟೆ ಹಾಕಿಸಿದ್ರು. ಎರಡು ಸುತ್ತು ಬಿಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಗೆ ಮಾಡಿಸಿಕೊಂಡ ಸಿಎಂ, ಮಾಧ್ಯಮದಲ್ಲಿ ಇಲ್ಲಿನ ಯಾವುದೇ ಸುದ್ದಿ ಬರದಂತೆ ಮಾಡಲು ಮಾಧ್ಯಮದವರಿಗೆ ಇನ್ನಿಲ್ಲದ ಸಮಸ್ಯೆ ಸೃಷ್ಟಿ ಮಾಡಿದ್ರು. ರೆಸಾರ್ಟ್ ಸುತ್ತಲೂ ಇರುವ ಸಾರ್ವಜನಿಕರಿಗೂ ಬೆದರಿಕೆ ಹಾಕುವ ಕೆಲಸವನ್ನು ಸಿಎಂ ನಿರ್ದೇಶನದಂತೆ ಪೊಲೀಸ್ ಅಧಿಕಾರಿಗಳು ಮಾಡಿದ್ದಾರೆ ಎಂಬ ಆರೋಪವೂ ಇದೆ. ಈ ವಿಚಾರವಾಗಿ ಮಾಧ್ಯಮದವರು ಮತ್ತು ಪೊಲೀಸರ ನಡುವೆ ಜಟಾಪಟಿಯಾದ್ರೂ ರೆಸಾರ್ಟ್ ಹೊರಗೆ ಇಣುಕಿ ನೋಡುವ ಕೆಲಸ ಸಿಎಂ ಮಾಡಲಿಲ್ಲ. ಮಂಡ್ಯ ಕ್ಷೇತ್ರದ ಅಪ್‌ಡೇಟ್‌ಗಾಗಿ ಮಂಡ್ಯ ಉಸ್ತುವಾರಿ ಪುಟ್ಟರಾಜು ಅವರನ್ನು ಕರೆಸಿಕೊಂಡ ಸಿಎಂ ನಡೆಯಲ್ಲಿಯೇ ಆತಂಕ ಎದ್ದು ಕಾಣುತ್ತಿತ್ತು.
ಸಿಎಂ ಕುಮಾರಸ್ವಾಮಿ ಅವರಿಗೆ ಮೈತ್ರಿ ಸರಕಾರದ ಗೊಂದಲ ಮತ್ತು ಈ ಬಾರಿಯ ಲೋಕಸಭಾ ಚುನಾವಣೆ, ಮಾನಸಿಕ ಆರೋಗ್ಯ ಹಾಳು ಮಾಡುವಷ್ಟು ಟೆನ್ಷನ್ ನೀಡಿದೆ. ರಿಲ್ಯಾಕ್ಸ್‌ಗಾಗಿ ಬಂದರೂ ಮಾಧ್ಯಮದಲ್ಲಿ ಬರುವ ದಿನಕ್ಕೊಂದು ಹೇಳಿಕೆಗಳು ಸಿಎಂ ಶಾಂತಿಗೆ ಭಂಗ ತರುತ್ತಿದೆ.