ಉಡುಪಿ : ಮೇಲ್ಸೆತುವೆ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತು ಸಂಸದೆ ಶೋಭಾ ಕರಂದ್ಲಾಜೆಯವರ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಪುರಸಭಾ ಸದಸ್ಯ ಚಂದ್ರಶೇಖರ್ ಖಾರ್ವಿ ಆರೋಪಿಸಿದರು.
ಕುಂದಾಪುರ ಪುರಸಭೆಯ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನವಯುಗ ಕಂಪನಿ ಅಧಿಕಾರಿಗಳಿಗೆ ಬಾಯಿ ಮಾತಿನಲ್ಲಿ ಎಚ್ಚರಿಕೆ ನೀಡಿದರೆ ಪ್ರಯೋಜನವಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಹಿರಿಯ ಸದಸ್ಯ ಮೋಹನ್ ದಾಸ್ ಶೆಣೈ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗುವಾಗ ನಿಮ್ಮ ಕಾಂಗ್ರೆಸ್ ಸರ್ಕಾರ ಇತ್ತು. ಆಗ ನೀವು ಮಾಡಿದ ತಪ್ಪುಗಳನ್ನು ಸರಿಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದರು. ಈ ವೇಳೆ ಮಾತನಾಡಿದ ಪುರಸಭಾ ಸದಸ್ಯ ಗಿರೀಶ್, ರಾಜಕೀಯ ಬಿಟ್ಟು ಪಕ್ಷಾತೀತವಾಗಿ ಜನರ ಸಮಸ್ಯೆ ಬಗೆಹರಿಸೋಣ ಎಂದರು. ಹೀಗಾಗಿ, ಸಭೆಯಲ್ಲಿ ಸ್ವಲ್ಪ ಕಾಲ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆಯಿತು.
ಕೈ-ಕಮಲ ಸದಸ್ಯರ ನಡುವೆ ಜಟಾಪಟಿ ರಾಷ್ಟ್ರೀಯ ಪ್ರಾಧಿಕಾರದ ತಾಂತ್ರಿಕ ಇಂಜಿನಿಯರ್ ರಮೇಶ್ ಬಾಬು ಪ್ರತಿಕ್ರಿಯಿಸಿ, ಪ್ರತಿನಿತ್ಯ ಕುಂದಾಪುರ ಮೇಲ್ಸೆತುವೆ ಕಾಮಗಾರಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಜಿಲ್ಲಾಧಿಕಾರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸರ್ವಿಸ್ ರಸ್ತೆಯಲ್ಲಿ ಬೆಳೆದಿರುವ ಹುಲ್ಲು ಕತ್ತರಿಸಿ, ಹೊಂಡಗಳನ್ನು ಮುಚ್ಚಿಸಿ ವಾರದೊಳಗೆ ವ್ಯವಸ್ಥಿತ ರಸ್ತೆ ಮಾಡಿಸುತ್ತೇವೆ. ಮೇಲ್ಸೆತುವೆ ಕಾಮಗಾರಿ ಕೋವಿಡ್ ಕಾರಣದಿಂದ ವಿಳಂಬವಾಗಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದರು.
ಓದಿ : ರಾಜ್ಯದ ಗ್ರಾಪಂ ಚುನಾವಣೆಯಲ್ಲಿ ಗೆಲುವು: ಆದರೆ ಫ್ಲೆಕ್ಸ್ ಮಾತ್ರ ಮರಾಠಿಯದ್ದು!
ಜಲಮಂಡಳಿಯ ಕಿರಿಯ ಅಧಿಕಾರಿಗಳು ಮಾತ್ರ ಹಾಜರಾಗಿದ್ದಕ್ಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ನೀರು ಪೂರೈಕೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಹಿರಿಯ ಅಧಿಕಾರಿಗಳೇ ಉತ್ತರಿಸಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ವೀಣಾ ಭಾಸ್ಕರ್, ಹಿರಿಯ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಹಾಜರಿರುವಂತೆ ತಾಕೀತು ಮಾಡಿದರು.
ಒಳಚರಂಡಿ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಒಳಚರಂಡಿ ಮಂಡಳಿಗೆ ಪುರಸಭೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು.