ಉಡುಪಿ :ನಾಗಾರಾಧನೆ ಕರಾವಳಿಯ ಮಣ್ಣಿನ ಪ್ರತೀಕ. ಸಂಬಂಧ ಮತ್ತು ಹುಟ್ಟಿನ ಶ್ರೇಯಸ್ಸಿಗಾಗಿ ಭಕ್ತಿಯಿಂದ ಕರಾವಳಿಗರು ನಾಗನನ್ನು ನಂಬುತ್ತಾರೆ. ಹೀಗಾಗಿ ಇಂದು ಇಡೀ ದಿನ ಕರಾವಳಿಯ ಮೂಲೆ ಮೂಲೆಗಳಲ್ಲಿ ಸುಬ್ರಹ್ಮಣ್ಯ ಷಷ್ಠಿಯ ಸಂಭ್ರಮ ಮನೆ ಮಾಡಿದೆ. ಕೊರೊನಾ ನಿಯಮದ ನಡುವೆಯೂ ಭಕ್ತರು ಷಷ್ಠಿಯಲ್ಲಿ ಭಕ್ತಿ, ಶ್ರದ್ಧೆಯಿಂದ ಭಾಗವಹಿಸುತ್ತಿದ್ದಾರೆ.
ತುಳುನಾಡು ಅಂದ್ರೆ ನಾಗ ನೆಲೆಯ ಮಣ್ಣು ಅನ್ನೋ ನಂಬಿಕೆ. ನಾಗಾರಾಧನೆಗೆ ಇಲ್ಲಿ ವಿಶೇಷ ಪ್ರಾಶಸ್ತ್ಯ ನೀಡಿದ್ದಾರೆ. ಕರಾವಳಿ ಭಾಗದ ಜನರು ಇಂದು ಚಂಪಾಷಷ್ಠಿಯ ಆಚರಣೆಯಲ್ಲಿ ತೊಡಗಿದ್ದಾರೆ. ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ನಾಗ ಮತ್ತು ಸುಬ್ರಹ್ಮಣ್ಯನ ಆರಾಧನೆಗೆ ವಿಶೇಷ ದಿನ ಎಂದು ಖ್ಯಾತಿ ಪಡೆದಿದೆ.
ಕರಾವಳಿಯಲ್ಲಿ ಹೆಜ್ಜೆಗೊಂದರಂತೆ ಸಿಗುವ ನಾಗ ಆಲಯಗಳಲ್ಲಿ ಇಂದು ಮುಂಜಾನೆಯಿಂದಲೇ ತನು ತಂಬಿಲ ಸೇವೆ, ಆಶ್ಲೇಷ ಬಲಿ ಪೂಜೆಗೆ ಹಾಲಿಟ್ಟು ಸೇವೆಗಳು ನಡೆಯುತ್ತಿವೆ. ಉಡುಪಿಯ ಆದಿದೇವರಾದ ಅನಂತೇಶ್ವರ ದೇವರ ಪರಿವಾರವಾಗಿ ನಾಲ್ಕು ಪ್ರಮುಖ ಸುಬ್ರಹ್ಮಣ್ಯ ಕ್ಷೇತ್ರಗಳಿವೆ. ತಾಂಗೋಡು, ಮಾಂಗೋಡು, ಅರಿತೋಡು ಮತ್ತು ಮುಚ್ಲುಕೊಡು ಸೇರಿದಂತೆ ನೂರಾರು ಕ್ಷೇತ್ರಗಳಲ್ಲಿ ಇಂದು ವೈಭವದ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ.
ಕರಾವಳಿಯಲ್ಲಿ ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ :ನಾಗದೇವರು ಸಂತಾನ, ಐಶ್ವರ್ಯ ದಾಯಕ ಎಂಬ ನಂಬಿಕೆ ಇದೆ. ಇದರ ಜೊತೆಗೆ ನಾಗದೋಷ, ಚರ್ಮದೋಷ, ದೃಷ್ಟಿದೋಷ ಮೊದಲಾದ ಸಮಸ್ಯೆಗಳಿದ್ದರೆ ಚಂಪಾ ಷಷ್ಠಿಯ ದಿನ ನಾಗನ ಆರಾಧನೆ ಮಾಡುವುದರಿಂದ ಪರಿಹಾರ ಸಿಗುತ್ತದೆ ಎನ್ನಲಾಗಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನಾಗ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ಸೇವೆಯಲ್ಲಿ ಸಲ್ಲಿಸುತ್ತಾರೆ.