ಉಡುಪಿ: ವಸ್ತ್ರಸಂಹಿತೆ ಬಗ್ಗೆ ಸರ್ಕಾರದ ಆದೇಶವಿದ್ದರೂ ಕುಂದಾಪುರ ಸರ್ಕಾರಿ ಕಾಲೇಜಿನಲ್ಲಿ ಮತ್ತೆ ವಿದ್ಯಾರ್ಥಿನಿಯರು ಹಿಜಾಬ್ ತೊಟ್ಟು ಕಾಲೇಜಿಗೆ ಬಂದಿದ್ದಾರೆ. ಇಂದು ಕಾಲೇಜಿನ ಆವರಣದೊಳಗೆ ಪ್ರವೇಶ ನೀಡಲಾಗಿದೆ. ಆದರೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನೀಡಿಲ್ಲ ಬದಲಾಗಿ ಕುಳಿತುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಪ್ರಾಂಶುಪಾಲರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ತೆಗೆದು ಕ್ಲಾಸಿನಲ್ಲಿ ಕುಳಿತುಕೊಳ್ಳುವಂತೆ ಪರಿಪರಿಯಾಗಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯರು, ನಾವು ಹಿಜಾಬ್ ತೆಗೆಯಲ್ಲ, ನಮಗೆ ನಮ್ಮ ಮನೆಯಲ್ಲಿ ಹೇಳಿದ್ದಾರೆ ಎಂದಿದ್ದಾರೆ.
ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ ಕಾಲೇಜು ಆವರಣದಲ್ಲಿರುವ ಪ್ರತ್ಯೇಕ ಕೊಠಡಿಯಲ್ಲಿ ವಿದ್ಯಾರ್ಥಿನಿಯರು ಕುಳಿತುಕೊಂಡಿದ್ದಾರೆ. ಮಂಗಳವಾರ ಹೈಕೋರ್ಟ್ ಆರ್ಡರ್ ಬರಲಿದೆ. ಮುಂದಿನ ನಡೆ ಏನು ಎಂಬುದನ್ನು ಆಮೇಲೆ ನಿರ್ಧರಿಸುತ್ತೇವೆ ಎಂದು ಹಿಜಾಬ್ ತೊಟ್ಟು ಬಂದ ವಿದ್ಯಾರ್ಥಿನಿಯರು ಹೇಳಿದ್ದಾರೆ.
ವಿದ್ಯಾರ್ಥಿನಿಯರು ಕಳೆದ ವಾರ ಗೇಟಿನಿಂದ ಹೊರಗೆ ಕುಳಿತು ಪ್ರತಿಭಟಿಸಿದ್ದರು. ವಸ್ತ್ರಸಂಹಿತೆ ಕುರಿತು ಸರ್ಕಾರದ ಆದೇಶದ ಪ್ರತಿಯನ್ನು ಪದವಿ ಪೂರ್ವ ಕಾಲೇಜು ಗೇಟಿನಲ್ಲಿ ಅಳವಡಿಸಲಾಗಿದೆ. ಈ ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಲಿದ್ದು, ನ್ಯಾಯಾಲಯದಲ್ಲಿ ಯಾವ ತೀರ್ಪು ಬರಲಿದೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.
(ವಿಜಯಪುರದಲ್ಲೂ ಹಿಜಾಬ್ ವಿರೋಧಿಸಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು)