ಉಡುಪಿ :ದಸರಾ ರಜೆಯ ಮಜೆಯಲ್ಲಿದ್ದ ಇಬ್ಬರು ಮಕ್ಕಳು ಈಜಲು ಹೋಗಿ ನೀರು ಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಕಂಬದಕೋಣೆ ಬಳಿ ನಡೆದಿದೆ.
ಕಂಬದಕೋಣೆಯ ಎಡಮಾವಿನ ಹೊಳೆ ಬೊನ್ನರ್ಯನ ಗುಂಡಿಯಲ್ಲಿ ಮಕ್ಕಳು ಈಜಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ವಂಶಿತ್ ಶೆಟ್ಟಿ (12) ಮತ್ತು ರಿತೇಶ್ ಶೆಟ್ಟಿ ( 12) ನೀರುಪಾಲಾದ ಮಕ್ಕಳು. ಸ್ಥಳೀಯ ಸಂದೀಪನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನ 7ನೇ ತರಗತಿಯಲ್ಲಿ ಕಲಿಯುತ್ತಿದ್ದ ಮಕ್ಕಳು ದಸರಾ ರಜೆ ಇರುವ ಕಾರಣ ಈಜಲು ತೆರಳಿದಾಗ ಈ ಘಟನೆ ಸಂಭವಿಸಿದೆ.
ಈಜಲು ಹೋಗಿ ಪ್ರಾಣಬಿಟ್ಟ ಮಕ್ಕಳು ಒಟ್ಟು ನಾಲ್ಕು ಜನ ವಿದ್ಯಾರ್ಥಿಗಳು ಈಜಲು ತೆರಳಿದ್ದರು. ಪ್ರದ್ವಿತ್ ಶೆಟ್ಟಿ ಮತ್ತು ವಿಜಯೇಂದ್ರ ಶೆಟ್ಟಿಗೆ ಈಜು ಬರುವ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ನಾಪತ್ತೆಯಾದವರ ಹುಡುಕಾಟದಲ್ಲಿ ತೊಡಗಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಮಾಹಿತಿ ಪಡೆದುಕೊಂಡರು. ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಲ ಗ್ರಾಮದ ಜನರು ಮಕ್ಕಳು ನೀರುಪಾಲಾದ ಸ್ಥಳದಲ್ಲಿ ಜಮಾಯಿಸಿದ್ದು, ಹೆತ್ತವರ ಶೋಕ ಮುಗಿಲು ಮುಟ್ಟಿದೆ.