ಉಡುಪಿ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಪೇಜಾವರ ಶ್ರೀಗಳಂತಹ ಮಹಾನುಭಾವರ ಕನಸು. ದೇಶದ ಅನೇಕ ಮಹಾಪುರುಷರ ಆಂದೋಲನದ ಫಲ. ಈ ಎಲ್ಲಾ ಮಹಾನುಭಾವರ ಒಳಗೊಳ್ಳುವಿಕೆಯಿಂದ ಟ್ರಸ್ಟ್ ನಿರ್ಮಾಣವಾಗಲಿ ಎಂದು ಯೋಗ ಗುರು ಬಾಬಾ ರಾಮ್ ದೇವ್ ಆಶಿಸಿದರು.
ಐದು ದಿನ ಯೋಗ ಮತ್ತು ಧ್ಯಾನ ಶಿಬಿರ ನಡೆಸಿಕೊಡಲು ಉಡುಪಿಗೆ ಆಗಮಿಸಿ ಮಾತನಾಡಿದ ಅವರು, ವ್ಯಾಟಿಕನ್, ಮೆಕ್ಕಾದ ರೀತಿಯಲ್ಲೇ ರಾಮಮಂದಿರ ರೂಪುಗೊಳ್ಳಬೇಕು. ಅಯೋಧ್ಯೆ ಕೇವಲ ರಾಮಮಂದಿರ ಮಾತ್ರವಲ್ಲ, ವೈದಿಕ ಜ್ಞಾನ ಪರಂಪರೆಯ ಪ್ರತೀಕ. ಅಲ್ಲದೆ, ಹಿಂದೂಗಳ ಮಹಾ ತೀರ್ಥಕ್ಷೇತ್ರವಾಗಲಿ ಅನ್ನೋದು ನನ್ನ ಬಯಕೆ. ಎಂದು ಆಶಯ ವ್ಯಕ್ತಪಡಿಸಿದರು.
ರಾಮನವಮಿ ದಿನದಂದೇ ರಾಮಮಂದಿರಕ್ಕೆ ಶಿಲಾನ್ಯಾಸವಾಗಲಿ. ಪ್ರಧಾನಿಯವರೇ ಶಿಲಾನ್ಯಾಸ ಮಾಡಬೇಕು. ಪ್ರಧಾನಿ ಮೋದಿಯೇ ಹಿಂದೂ ಪರಂಪರೆಯ ಪ್ರತಿನಿಧಿಯಾಗಿ ಈ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಮಂದಿರದ 67 ಎಕರೆ ಭೂಮಿ ಹೊರತುಪಡಿಸಿ ಮಸೀದಿ ನಿರ್ಮಾಣವಾಗಬೇಕು. ಅಯೋಧ್ಯೆಯಲ್ಲಿ ಮಸೀದಿಯೂ ದಿವ್ಯವಾಗಿ ನಿರ್ಮಿಸಲಿ. ದೇಶದಲ್ಲಿ ಹಿಂದೂ ಮುಸ್ಲಿಮರ ಡಿಎನ್ಎ ಒಂದೇ. ಮುಸ್ಲಿಮರಿಗೆ 5 ಎಕರೆ ಭಿಕ್ಷೆ ಬೇಡ ಎಂದಿದ್ದ ಅಸಾವುದ್ದೀನ್ ಓವೈಸಿ ಮಾತಿಗೆ ಟಾಂಗ್ ಕೊಟ್ಟ ಬಾಬಾ ರಾಮ್ ದೇವ್, ತಲೆಕೆಟ್ಟ ಮನೋಸ್ಥಿತಿಯಲ್ಲಿರುವ ಆತನ ಮನಸ್ಸಿನಲ್ಲಿ ವಿಷವೇ ತುಂಬಿದೆ. ಹಿಂದೂ-ಮುಸ್ಲಿಮರಲ್ಲಿ ಸಂಘರ್ಷ ಉಂಟು ಮಾಡುವ ಪ್ರಯತ್ನಿಸುತ್ತಿದ್ದಾರೆ. ಒವೈಸಿ ಎರಡನೇ ಜಿನ್ನಾ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅಂತಾರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್ ಅಸ್ತಿತ್ವಕ್ಕೆ ಬಂದಿದ್ದು, ರಾಮ್ ದೇವ್ ಇದರ ಮೊದಲ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದರ ಬಗ್ಗೆ ಸಂತಸ ಹಂಚಿಕೊಂಡರು. ಒಲಿಂಪಿಕ್ಸ್ವರೆಗೂ ಯೋಗ ಕೊಂಡೊಯ್ಯಲು ಇದು ವೇದಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೃಷ್ಣಮಠಕ್ಕೆ ಭೇಟಿ ನೀಡಿದ ಬಾಬಾ ರಾಮ್ ದೇವ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇಂದಿನಿಂದ ಐದು ದಿನಗಳ ಕಾಲ ಉಡುಪಿಯಲ್ಲೇ ತಂಗಲಿದ್ದು, ಪ್ರತಿದಿನ ಬೆಳಿಗ್ಗೆ ಕೃಷ್ಣಮಠದಲ್ಲಿ ಯೋಗ ಶಿಬಿರ ನಡೆಸಿಕೊಡಲಿದ್ದಾರೆ.