ಉಡುಪಿ:ಪೊಲೀಸ್ ತನಿಖೆಯಲ್ಲಿ ಶಾರೀಕ್ ಉಡುಪಿಗೆ ಬಂದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆ ಪ್ರಯುಕ್ತ ಮಂಗಳೂರು ಸಿಟಿ ಪೊಲೀಸರು ಉಡುಪಿಗೆ ಬಂದು ವಿಚಾರಣೆ ನಡೆಸಿದ್ದರು. ಅಕ್ಟೋಬರ್ ತಿಂಗಳಲ್ಲಿ ಒಂದು ಬಾರಿ ಈ ಭಾಗದಲ್ಲಿ ಆತ ಪ್ರವಾಸ ಮಾಡಿದ್ದ. ಹೀಗಾಗಿಯೇ ಮಂಗಳೂರು ಪೊಲೀಸರು ತನಿಖೆ ನಡೆಸಿ ಹೋಗಿದ್ದಾರೆ. ಉಡುಪಿ ಪೊಲೀಸರು ಈ ಪ್ರಕರಣದ ತನಿಖಾಧಿಕಾರಿಗಳಲ್ಲ. ಈ ಬಗ್ಗೆ ಮಂಗಳೂರು ಪೊಲೀಸರೇ ವಿವರವಾದ ಮಾಹಿತಿ ನೀಡುತ್ತಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ಹೇಳಿದ್ದಾರೆ.
ಕಾರ್ಮಿಕರಾಗಿ ಬರುವವರ ದಾಖಲೆ ಸತ್ಯಾಸತ್ಯತೆ ಪರಿಶೀಲನೆ ವಿಚಾರವಾಗಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೇಂದ್ರ ಹಾಕೆ, ನಮ್ಮ ಜಿಲ್ಲೆಯ ಮಲ್ಪೆ ಭಾಗಕ್ಕೆ ಹೊರ ರಾಜ್ಯಗಳಿಂದ ಅನೇಕ ಕಾರ್ಮಿಕರು ಬರುತ್ತಾರೆ. ಮೀನುಗಾರ ಸಂಘಟನೆಗಳ ಜೊತೆ ನಾವು ಈಗಾಗಲೇ ಮಾತನಾಡಿದ್ದೇವೆ. ಮೀನುಗಾರಿಕಾ ಬೋಟುಗಳಲ್ಲಿ ಮತ್ತು ಮೀನು ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಲು ಹೊರರಾಜ್ಯದ ಕಾರ್ಮಿಕರು ಹೆಚ್ಚಾಗಿ ಬರುತ್ತಾರೆ. ಬಲೆ ನೇಯುವ ಕಾರ್ಖಾನೆಗಳು ಐಸ್ ಫ್ಯಾಕ್ಟರಿಗಳಲ್ಲಿ ದುಡಿಯುತ್ತಾರೆ. ಮೀನುಗಾರಿಕಾ ಸಂಘಟನೆಗಳು ಈ ಕಾರ್ಮಿಕರ ಎಲ್ಲ ವಿವರ ಸಂಗ್ರಹಿಸುವಂತೆ ಸೂಚಿಸಲಾಗಿದೆ. ತಾತ್ಕಾಲಿಕ ನೆಲೆಯಲ್ಲಿ ಕಾರ್ಮಿಕರು ಬಂದಿದ್ದರು. ಮಾಹಿತಿ ಸಂಗ್ರಹ ಕಡ್ಡಾಯ ಮಾಡಲಾಗಿದೆ ಎಂದರು.