ತುಮಕೂರು:ಶಿರಾ ವಿಧಾನಸಭಾ ಉಪ ಚುನಾವಣೆ ಸಂಬಂಧ ಒಂದೆಡೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಮಬಲದ ಪೈಪೋಟಿ ನಡೆಸುತ್ತಿವೆ. ಇನ್ನೊಂದೆಡೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಮೂರು ಪಕ್ಷಗಳು ಗಮನ ಹರಿಸುತ್ತಿಲ್ಲ. ಪ್ರಮುಖವಾಗಿ ಈ ಭಾಗದ ಪ್ರಮುಖ ಬೆಳೆಯಾಗಿರುವ ಶೇಂಗಾ ರೈತರ ಹಿತರಕ್ಷಣೆ ಕುರಿತು ಯಾರೂ ಕೂಡ ಪ್ರಸ್ತಾಪಿಸುತ್ತಿಲ್ಲ. ಹೀಗಾಗಿ ಶೇಂಗಾ ಬೆಳೆಗಾರರ ಪರವಾಗಿ ಚುನಾವಣೆಗೆ ಸ್ಪರ್ಧಿಸಲು ಶೇಂಗಾ ನಾಡು ಹಿತರಕ್ಷಣಾ ವೇದಿಕೆ ವತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೇಂಗಾ ನಾಡು ಹಿತರಕ್ಷಣಾ ವೇದಿಕೆ ಅಧ್ಯಕ್ಷರಾಗಿರುವ ತಿಮ್ಮರಾಯಿಗೌಡ ಪಕ್ಷೇತರ ಅಭ್ಯರ್ಥಿಯಾಗಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ಶಿರಾ ಉಪ ಕದನ: ಶೇಂಗಾ ಬೆಳೆಗಾರರ ವೇದಿಕೆಯಿಂದ ತಿಮ್ಮರಾಯಿಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ
ಶಿರಾ ವಿಧಾನಸಭಾ ಉಪ ಚುನಾವಣೆ ಸಂಬಂಧ ಶೇಂಗಾ ಬೆಳೆಗಾರರ ಪರವಾಗಿ ಚುನಾವಣೆಗೆ ಸ್ಪರ್ಧಿಸಲು ಶೇಂಗಾನಾಡು ಹಿತರಕ್ಷಣಾ ವೇದಿಕೆ ವತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 38,500 ಎಕರೆ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿದೆ. ಶೇಂಗಾ ಬೆಳೆಗಾರರು ಈಗಾಗಲೇ ನುಸಿರೋಗ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಿರುವ ಶೇಂಗಾ ಬೆಳೆಯನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸ ಪಡುತ್ತಿದ್ದಾರೆ. ಪ್ರತಿ ವರ್ಷ ಶೇಂಗಾ ಬೆಳೆಗಾರರ ಸಮಸ್ಯೆಯನ್ನು ಆಲಿಸಲು ಯಾವುದೇ ಜನಪ್ರತಿನಿಧಿಗಳು ಮುಂದಾಗುವುದಿಲ್ಲ. ಬದಲಾಗಿ ಜನಪ್ರತಿನಿಧಿಗಳ ಬಳಿ ರೈತರೇ ತೆರಳಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಶೇಂಗಾ ಬೆಳೆಗಾರರೊಂದಿಗೆ ಮಾತುಕತೆ ನಡೆಸಿ ವೇದಿಕೆ ವತಿಯಿಂದಲೇ ಚುನಾವಣೆಗೆ ಸ್ಪರ್ಧಿಸಿದರೆ ಸ್ವತಃ ಒಬ್ಬ ರೈತರಾಗಿ ಶೇಂಗಾ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ಸಹಕಾರಿಯಾಗಲಿದೆ ಎಂದು ವೇದಿಕೆಯ ಅಧ್ಯಕ್ಷ ತಿಮ್ಮರಾಯಿಗೌಡ ಹೇಳಿದ್ದಾರೆ.
ಕೊರೊನಾ ಹರಡುವಿಕೆ ಭೀತಿ ಹಿನ್ನೆಲೆ ಕೆಲಸ ಅರಸಿ ಗ್ರಾಮೀಣ ಪ್ರದೇಶಗಳಿಂದ ಹೋಗಿದ್ದ ಜನರು ವಾಪಸ್ ಬಂದು ಈ ಬಾರಿ ಶೇಂಗಾ ಬೆಳೆಯುತ್ತಾ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಅಲ್ಲದೆ ಉತ್ತಮ ಮಳೆಯಿಂದ ಶೇಂಗಾ ಭರ್ಜರಿಯಾಗಿ ಬಿತ್ತನೆಯಾಗಿದೆ. ಆದರೆ ತೃಪ್ತಿಕರ ಬೆಲೆ ಇಲ್ಲದೆ ಶೇಂಗಾ ಬೆಳೆಗಾರರು ಕಂಗಾಲಾಗಿದ್ದಾರೆ. ರೈತರ ಸಮಸ್ಯೆಯನ್ನು ಬಗೆಹರಿಸಲು ಚುನಾವಣೆಗೆ ಸ್ಪರ್ಧಿಸಿರುವ ಯಾವುದೇ ಪಕ್ಷಗಳು ಪ್ರತಿಕ್ರಿಯಿಸುತ್ತಿಲ್ಲ. ಇದು ಸಾಕಷ್ಟು ನೋವು ತಂದಿದೆ. ಹೀಗಾಗಿ ಶೇಂಗಾ ಬೆಳೆಗಾರರ ಹಿತರಕ್ಷಣಾ ವೇದಿಕೆ ವತಿಯಿಂದ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.