ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ನಿಷೇಧಾಜ್ಞೆ ಜಾರಿಯಾಗಿದ್ದು, ಜೂನ್ 7ರವರೆಗೆ ಮುಂದುವರಿಯಲಿದೆ ಎಂದು ಡಿಸಿ ಜಗದೀಶ್ ಹೇಳಿದ್ದಾರೆ.
ಇಂದು ಬೆಳಿಗ್ಗೆ 6 ರಿಂದ ಜೂನ್ 7ರ ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಾಗಲಿದ್ದು, ಅನಗತ್ಯ ತಿರುಗಾಟಕ್ಕೆ ಸಂಪೂರ್ಣ ಬ್ರೇಕ್ ಹಾಕುವುದು ಜಿಲ್ಲಾಡಳಿತದ ಉದ್ದೇಶವಾಗಿದೆ. ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಿದ್ದು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಜನರು ಅಗತ್ಯ ಸೇವೆಗಳಿಗೆ ತೆರಳಬಹುದು. ಹೋಟೆಲ್ ಪಾರ್ಸೆಲ್ಗಳಿಗೆ ಕಾಲ್ನಡಿಗೆಯಲ್ಲಿ ತೆರಳಬೇಕು. ಉಳಿದಂತೆ ಸರ್ಕಾರದ ಮಾರ್ಗಸೂಚಿಯಂತೆ ನಿಯಮ ಜಾರಿಯಲ್ಲಿರಲಿದೆ.
ಜನರ ಸಹಕಾರಕ್ಕೆ ಧನ್ಯವಾದ
ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಜನರ ಸಹಕಾರಕ್ಕೆ ಧನ್ಯವಾದ ಹೇಳುತ್ತೇನೆ. ಇದೇ ರೀತಿ ಸಹಕಾರ ನೀಡಿದರೆ ಇನ್ನೊಂದು ಲಾಕ್ಡೌನ್ಗೆ ಹೋಗುವುದು ತಪ್ಪಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಹೇಳಿದ್ದಾರೆ.
ನಾನು ಜಿಲ್ಲೆಯ ಅನೇಕ ಸೋಂಕಿತರ ಮನೆಗಳಿಗೆ ಮತ್ತು ಐಸೊಲೇಟೆಡ್ ಆದವರನ್ನು ಸಂಪರ್ಕಿಸಿದ್ದೇನೆ. ಇಲ್ಲಿ ತಿಳಿದ ವಿಷಯವೆಂದರೆ ಮದುವೆ ಸಮಾರಂಭಗಳಿಗೆ ಮೆಹಂದಿ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳಿಗೆ ಹೋದವರಿಗೆ ಸೋಂಕು ತಗಲುವುದು ಕಂಡುಬರುತ್ತಿದೆ. ಗುಂಪಾಗಿ ಅಗತ್ಯ ವಸ್ತು ಖರೀದಿಸುವವರಿಗೂ ಸೋಂಕು ಕಂಡು ಬರುತ್ತಿದೆ. ಆದ್ದರಿಂದ ಯಾವುದೇ ಸಮಾರಂಭಗಳಿಗೂ ಹೋಗಬೇಡಿ. ಗುಂಪು ಸೇರಬೇಡಿ. ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಇದೇ ಸಹಕಾರ ಮುಂದೆಯೂ ಇರಲಿ. ಸಹಕಾರ ನೀಡುತ್ತಿರುವುದಕ್ಕೆ ಜನತೆಗೆ ಧನ್ಯವಾದ ಹೇಳುತ್ತೇನೆ ಎಂದು ಡಿಸಿ ಹೇಳಿದ್ದಾರೆ.