ಬೆಂಗಳೂರು/ಉಡುಪಿ:ಹಿಜಾಬ್-ಕೇಸರಿ ಶಾಲು ವಿವಾದದ ನಡುವೆ ರಾಜ್ಯದಲ್ಲಿ ಇಂದಿನಿಂದ 9 ಮತ್ತು 10ನೇ ತರಗತಿ ಆರಂಭವಾಗಿವೆ. ಹಿಂದಿನಂತೆಯೇ ವಿದ್ಯಾರ್ಥಿಗಳು ಶಾಲೆಗಳತ್ತ ಆಗಮಿಸುತ್ತಿದ್ದಾರೆ. ಶಾಲೆಗಳ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದ್ದು, ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.
ಹಿಜಾಬ್-ಕೇಸರಿ ಶಾಲು ವಿವಾದವು ತಾರಕಕ್ಕೇರಿದ ಹಿನ್ನೆಲೆಯಲ್ಲಿ ಹೈಸ್ಕೂಲು-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. 1-8ನೇ ತರಗತಿಗಳು ಎಂದಿನಂತೆ ನಡೆಯುತ್ತಿದ್ದವು. ಬಳಿಕ ಹಿಜಾಬ್ ವಿವಾದದ ಕುರಿತಂತೆ ಸಲ್ಲಿಕೆಯಾಗಿರುವ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್ ಶಾಲೆ ಆರಂಭಿಸುವಂತೆ ತಿಳಿಸಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಉಡುಪಿ ಜಿಲ್ಲೆಯಲ್ಲಿರುವ ಎಲ್ಲಾ ಪ್ರೌಢಶಾಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 144ರ ಅಡಿಯಲ್ಲಿ ಫೆಬ್ರವರಿ 19ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಲ್ಲದೆ, ಶಿವಮೊಗ್ಗ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಪ್ರೌಢಶಾಲೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಸೆಕ್ಷನ್ 144 ಸೆಕ್ಷನ್ ಜಾರಿಯಲ್ಲಿದೆ.
ಬೆಂಗಳೂರಿನಲ್ಲೂ ಶಾಲೆ ಆರಂಭ:ನಗರದಲ್ಲೂ ಶಾಲೆಗಳು ಎಂದಿನಂತೆ ಆರಂಭಗೊಂಡಿವೆ. ಕಳೆದ 2 ದಿನಗಳ ಹಿಂದೆ ಶಿಕ್ಷಕಿ ಶಶಿಕಲಾ ಬೋರ್ಡ್ ಮೇಲೆ ಅವಮಾನಕರವಾಗಿ ಬರೆದಿದ್ದಾರೆ ಎಂದು ಆರೋಪಿಸಿ ನಗರದ ಚಂದ್ರಲೇಔಟ್ ಗಂಗಗೊಂಡನಹಳ್ಳಿಯಲ್ಲಿನ ವಿದ್ಯಾಸಾಗರ ಶಾಲೆಯಲ್ಲಿ ಪೋಷಕರು ಗಲಾಟೆ ನಡೆದಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಭದ್ರತೆ ಪರಿಶೀಲಿಸಿದರು. ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಸೂಚನೆ ಮೇರೆಗೆ ಎಸಿ ಶಿವಣ್ಣ ಕೂಡ ತರಗತಿಗೆ ಭೇಟಿ ನೀಡಿದ್ದರು.