ಉಡುಪಿ:ಕೊರೊನಾದಿಂದ ನೆನೆಗುದಿಗೆ ಬಿದ್ದಿದ್ದ ಸಪ್ತಪದಿ ಯೋಜನೆಗೆ ಮತ್ತೆ ಚಾಲನೆ ನೀಡುತ್ತಿರೋದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಕೊರೊನಾ ನಂತರ, ನೂರಾರು ಮದುವೆಗಳನ್ನು ಏಕಕಾಲದಲ್ಲಿ ಮಾಡುವುದು ಕಷ್ಟ, ಹಾಗಾಗಿ ತಿಂಗಳಿಗೆ ನಾಲ್ಕೈದು ಮುಹೂರ್ತ ನಿಗದಿ ಮಾಡುತ್ತೇವೆ. ಮಾರ್ಚ್ನಲ್ಲಿ 5, ಏಪ್ರಿಲ್ ಮತ್ತು ಮೇನಲ್ಲಿ 6 ದಿನಗಳ ಮುಹೂರ್ತ ನಿಗದಿಯಾಗಿದೆ. ಈ ಬಗ್ಗೆ ಎಲ್ಲಾ ದೇವಾಲಯಗಳಿಗೂ ಆದೇಶ ನೀಡಲಾಗಿದೆ . ಪ್ರತೀ ಜೋಡಿಗೆ 55,000 ರೂಗಳನ್ನು ಸರ್ಕಾರ ಖರ್ಚು ಮಾಡುತ್ತೆ. ಊಟೋಪಚಾರದ ಖರ್ಚು ಕೂಡ ಸರ್ಕಾರವೇ ನೋಡಿಕೊಳ್ಳುತ್ತದೆ . ಈ ಮೂಲಕ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.
ಕೊರೊನ ಕಾಲದಲ್ಲಿ ಸುಮಾರು ಒಂದೂವರೆ ಸಾವಿರ ಅರ್ಜಿಗಳು ಬಂದಿದ್ದವು. ಬಹುತೇಕ ಮದುವೆಗಳನ್ನು ಪೂರೈಸಿದ್ದೇವೆ .ಈಗ ಮತ್ತೆ ಹೊಸ ಅರ್ಜಿಗಳನ್ನು ಆಹ್ವಾನಿಸಿದ್ದೇವೆ. ಪ್ರಾದೇಶಿಕವಾಗಿ ಮುಹೂರ್ತ ವ್ಯತ್ಯಾಸವಿದ್ದರೂ ಅಲ್ಲಿನ ದೇವಸ್ಥಾನಗಳಿಗೆ ಅಧಿಕಾರ ನೀಡಲಾಗಿದೆ ಎಂದರು.
ದೇವಸ್ಥಾನಗಳ ಸರ್ಕಾರಿಕರಣ ವಿರೋಧಿಸಿ ವಿಶ್ವಹಿಂದೂ ಪರಿಷತ್ ಹೇಳಿಕೆ ನೀಡಿರೋದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟೀಕರಣ ನೀಡಿದ್ದಾರೆ. ರಾಜ್ಯ ಸರ್ಕಾರ ಯಾವುದೇ ದೇವಸ್ಥಾನಗಳ ಸರ್ಕಾರಿಕರಣಕ್ಕೆ ಮುಂದಾಗಿಲ್ಲ. 2011ರಲ್ಲಿ ಖಾಸಗಿ ದೇವಾಲಯಗಳ ನೋಂದಣಿಗೆ ಸರ್ಕಾರ ಸೂಚನೆ ನೀಡಿತ್ತು. ಧಾರ್ಮಿಕ ದತ್ತಿ ಕಾಯ್ದೆಯಂತೆ ಈ ಆದೇಶವಾಗಿತ್ತು. 2015 ರಲ್ಲಿ ಅಂದಿನ ರಾಜ್ಯ ಸರ್ಕಾರ ಮತ್ತೊಮ್ಮೆ ಕಡ್ಡಾಯ ಆದೇಶ ಮಾಡಿತು. 2015ರಿಂದ ಪ್ರತಿವರ್ಷ ನೆನಪೋಲೆ ದೇವಸ್ಥಾನಗಳಿಗೆ ಹೋಗುತ್ತಿದೆ.ಈ ಬಾರಿಯೂ ನೆನಪೋಲೆ ದೇವಸ್ಥಾನಗಳಿಗೆ ಹೋಗಿರುವುದರಿಂದ ಗೊಂದಲ ಉಂಟಾಗಿದೆ ಅಷ್ಟೇ. ನೆನಪೋಲೆ ಕಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದೇನೆ ಎಂದರು.
ಇದನ್ನು ಓದಿ:ಖಾಸಗಿ ದೇವಸ್ಥಾನ ವಶಪಡಿಸಿಕೊಳ್ಳುವ ಉದ್ದೇಶ ಸರ್ಕಾರಕ್ಕಿಲ್ಲ: ಕೋಟಾ ಶ್ರೀನಿವಾಸ ಪೂಜಾರಿ