ಉಡುಪಿ: ಪವಿತ್ರ ಪುಣ್ಯ ಕ್ಷೇತ್ರ ಕೊಲ್ಲೂರಿನಲ್ಲಿ ಸದ್ಯ ರೋಪ್ ವೇ ವಿವಾದ ಸದ್ದು ಮಾಡುತ್ತಿದೆ. ಕೊಲ್ಲೂರಿನಿಂದ ಕೊಡಚಾದ್ರಿ ಪರ್ವತದ ತುದಿಯವರೆಗೆ ಕೇಬಲ್ ಕಾರ್ ಮಾಡಲು ಮುಂದಾಗಿರುವ ಸರ್ಕಾರದ ಯೋಜನೆಗೆ ಪರಿಸರ ಆಸಕ್ತರ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಕುರಿತು ವರದಿ ಇಲ್ಲಿದೆ.
ಆದಿ ಶಂಕರಾಚಾರ್ಯರಿಂದ ಸ್ವಯಂಭು ಲಿಂಗದ ಜೊತೆಗೆ ಶ್ರೀಚಕ್ರ ಸ್ಥಾಪಿಸಲ್ಪಟ್ಟಿರುವ ಅತ್ಯಂತ ಶಕ್ತಿಶಾಲಿ ದೇಗುಲವೇ ಶ್ರೀ ಕ್ಷೇತ್ರ ಕೊಲ್ಲೂರು. ಈ ದೇಗುಲಕ್ಕೆ ಸಂಬಂಧಪಟ್ಟ ಹಾಗೆ ಇರುವ ಒಂದು ಪರ್ವತ ಕೊಡಚಾದ್ರಿ. ಈ ಗುಡ್ಡದ ಮೇಲೆ ಕಾಲಭೈರವ ಮತ್ತು ಭದ್ರಕಾಳಿ ಅಮ್ಮನವರ ಸಾನಿಧ್ಯವಿದೆ. ಅಂಬಾವನ ಚಿತ್ರಮೂಲ ಮೊದಲಾದ ಅನೇಕ ಪುರಾಣ ಪ್ರಸಿದ್ಧ ಸ್ಥಳಗಳು ಈ ಕೊಡಚಾದ್ರಿಯ ಮೇಲಿದೆ.
ಸರ್ಕಾರದ ನಿಲುವಿಗೆ ಏನಾಂತರೇ ಹೋರಾಟಗಾರರು ಜನರು ಇಲ್ಲಿಗೆ ಜೀಪ್ಗಳ ಮೂಲಕ ತೆರಳುತ್ತಾರೆ. ಅತ್ಯಂತ ದುರ್ಗಮ ಮತ್ತು ಕಡಿದಾದ ಈ ದಾರಿಯಲ್ಲಿ ಪ್ರಯಾಣ ಮಾಡುವುದೇ ಒಂದು ರೋಚಕ ಅನುಭವ. ನಿತ್ಯ ಸಾವಿರಾರು ಭಕ್ತರನ್ನು, ಚಾರಣಪ್ರಿಯರನ್ನು ಕೈಬೀಸಿ ಕರೆಯುವ ಈ ಪರ್ವತಕ್ಕೆ ರಾಜ್ಯ ಸರ್ಕಾರ ರೋಪ್ ವೇ ಮಾಡಲು ಮುಂದಾಗಿದೆ. ಬೈಂದೂರು ಕ್ಷೇತ್ರದ ಶಾಸಕರಾಗಿರುವ ಸುಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಕೆಲ ವಾರದ ಹಿಂದೆ ಇಲ್ಲಿ ಸರ್ವೇ ಕೆಲಸ ಕೂಡ ಆರಂಭವಾಗಿದೆ.
ರಾಜ್ಯ ಸರ್ಕಾರದ ಉದ್ದೇಶವೇನು?
ಕೊಲ್ಲೂರು ಸಮೀಪದ ದಳಿ ಎಂಬ ಪ್ರದೇಶದಿಂದ ಕೊಡಚಾದ್ರಿಯ ತುದಿಯವರೆಗೆ ಅಲ್ಲಲ್ಲಿ ಪಿಲ್ಲರ್ ಗಳನ್ನು ಅಳವಡಿಸಿ ರೋಪ್ ವೇ ಎಳೆಯುವ ಯೋಚನೆ ಇದೆ. ಹಿಮಾಚಲಪ್ರದೇಶ, ವೈಷ್ಣೋದೇವಿ, ಶಿಮ್ಲಾ ಮೊದಲಾದ ಪ್ರವಾಸಿ ಕೇಂದ್ರಗಳಂತೆ ಇಲ್ಲಿಯೂ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ರಾಜ್ಯ ಸರ್ಕಾರದ ಉದ್ದೇಶ. ಇದಲ್ಲದೇ ಕೊಡಚಾದ್ರಿಯ ತುದಿಯವರೆಗೆ ಕಾಲ್ನಡಿಗೆಯಲ್ಲಿ ಸಾಗಲು ಕಷ್ಟವಾಗುವ ಅಶಕ್ತರಿಗೆ, ವೃದ್ಧರಿಗೆ ಈ ಕೇಬಲ್ ಕಾರ್ ಅನುಕೂಲವಾಗುತ್ತೆ ಅನ್ನೋದು ಶಾಸಕರ ವಾದ. ಆದರೆ ಧಾರ್ಮಿಕ ಮುಖಂಡರಾದ ಕೇಮಾರು ಶ್ರೀಗಳು ಈ ಯೋಜನೆ ಕೊಡಚಾದ್ರಿಯ ಪಾವಿತ್ರತೆಗೆ ಧಕ್ಕೆ ತರುತ್ತದೆ ಎಂದು ಟೀಕಿಸಿದ್ದಾರೆ.
ಜೀಪ್ ಚಾಲಕರ ಬದುಕು ಬೀದಿಗೆ ಬರುವ ಭಯ
ಕೊಲ್ಲೂರಿನಿಂದ ಕೊಡಚಾದ್ರಿ ವರೆಗೆ ಜನರನ್ನು ಕರೆದೊಯ್ಯುವ ಜೀಪ್ಗಳಿವೆ. ಈ ಕೇಬಲ್ ಕಾರು ಬಂದರೆ ಈ ಜೀಪ್ ಚಾಲಕರ ಬದುಕು ಬೀದಿಗೆ ಬೀಳುತ್ತೆ ಎಂಬ ಆತಂಕವಿದೆ. ಕೊಲ್ಲೂರಿನಿಂದ ಕೊಡಚಾದ್ರಿಗೆ 40 ಕಿಲೋಮೀಟರ್ ದೂರವಿದ್ದು, ಜೀಪ್ನಲ್ಲಿ ಒಂದೂವರೆ ಗಂಟೆಯ ಪ್ರಯಾಣ ಮಾಡಬೇಕಾಗುತ್ತದೆ. ಆದರೆ, ರೋಪ್ ವೇ ಬಂದರೆ ಈ ಅಂತರ ಎಂಟು ಕಿಲೋಮೀಟರ್ ಗೆ ಕಡಿಮೆಯಾಗಿ ಕೇವಲ 15 ನಿಮಿಷದಲ್ಲಿ ಕೊಡಚಾದ್ರಿಯ ತುದಿ ತಲುಪಲು ಸಾಧ್ಯವಿದೆ. ಪ್ರವಾಸಿಗರಿಗೆ ಇದರಿಂದ ಅನುಕೂಲವಾದರೂ ರಸ್ತೆಯ ಮಧ್ಯಭಾಗದಲ್ಲಿರುವ ಅಂಗಡಿ - ಮುಂಗಟ್ಟುಗಳು ರೆಸಾರ್ಟ್ಗಳು ವ್ಯಾಪಾರವಿಲ್ಲದೇ ಮುಚ್ಚಿಹೋಗುವ ಸಾಧ್ಯತೆ ಇದೆ. ಜೊತೆಗೆ ಪರಿಸರಕ್ಕೂ ಈ ಯೋಜನೆ ಮಾರಕವಾಗಲಿದೆ. ಪಿಲ್ಲರ್ ಅಳವಡಿಸಲು ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಕೊಡಚಾದ್ರಿಯ ಮೇಲೂ ನಿರ್ಮಾಣ ಕಾಮಗಾರಿಗಳು ಹೆಚ್ಚಾದರೆ ಅಲ್ಲಿನ ಜೀವ ಸೂಕ್ಷ್ಮತೆಗೆ ದಕ್ಕೆಯಾಗಬಹುದು ಮತ್ತು ಮೋಜು ಮಸ್ತಿ ಗುಂಡು ತುಂಡಿನ ಪಾರ್ಟಿಗಳು ಕೂಡ ನಡೆಯುವ ಸಾಧ್ಯತೆ ಇದ್ದು, ಅಲ್ಲಿನ ದೈವಿಕ ವಾತಾವರಣ ನಾಶ ಆಗಬಹುದು ಎನ್ನುತ್ತಾರೆ ಹೋರಾಟಗಾರರು.
ಓದಿ:ಕೊಟ್ಟ ಸಾಲ ಮರಳಿ ಕೇಳಿದ್ದಕ್ಕೆ ನಡೀತು ಭೀಕರ ಕೊಲೆ.. ಸಿಸಿಬಿ ತನಿಖೆಯಿಂದ ಪ್ರಕರಣ ಬಯಲು
ಒಟ್ಟಿನಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ಸರ್ಕಾರ ಸ್ಥಳೀಯ ಭಕ್ತರ ಮತ್ತು ಪರಿಸರವಾದಿಗಳ ಬೇಡಿಕೆಗೆ ಜಗ್ಗುವ ಹಾಗೇ ಕಾಣುತ್ತಿಲ್ಲ. ಖುದ್ದು ಶಾಸಕ ಸುಕುಮಾರ್ ಶೆಟ್ಟಿ ಅವರೇ ಇದು ನನ್ನ ಕನಸಿನ ಪ್ರಾಜೆಕ್ಟ್ ಎನ್ನುವ ಮೂಲಕ ವಿರೋಧಿಗಳಿಗೆ ತನ್ನ ಸ್ಪಷ್ಟ ನಿಲುವನ್ನು ತಿಳಿಸಿದ್ದಾರೆ. ಮುಂದೇನಾಗುತ್ತೆ ಅಂತಾ ಕಾದುನೋಡಬೇಕಿದೆ.