ಭಟ್ಕಳ:ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡವನ್ನು ಜಾಲಿ ಗ್ರಾಮದ ತಲಗೇರಿ ಸರ್ಕಾರಿ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಕಟ್ಟಡವನ್ನು ರದ್ದುಪಡಿಸಿ ಸದರಿ ಕಟ್ಟಡವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭಟ್ಕಳ ತಾಲೂಕು ವೆಂಕಟಾಪುರ ಗ್ರಾಮದಲ್ಲಿ (ಸರ್ವೆ ನಂ. 135 ಕ್ಷೇತ್ರ 10–20-0, ಸರ್ವೇ ನಂ. 136 ಕ್ಷೇತ್ರ 10 16-0, ಸರ್ವೆ ನಂ. 142 ಕ್ಷೇತ್ರ 4-5-04, ಸರ್ವೆ 127 ಕ್ಷೇತ್ರ 19-3-0 ಪೈಕಿ 4-3-0) ಯಾವುದಾದರೂ ಒಂದು ನಿರ್ಧಿಷ್ಟ ಸ್ಥಳದಲ್ಲಿ ನಿರ್ಮಿಸಬೇಕೆಂದು ಆಗ್ರಹಿಸಿ ಭಟ್ಕಳ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಭಟ್ಕಳ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಭಟ್ಕಳ ಘಟಕ ಹಾಗೂ ಕಾಲೇಜು ವಿದ್ಯಾರ್ಥಿಗಳು ಮನವಿ ಮಾಡಿದ್ದು ಭಟ್ಕಳ ತಾಲೂಕಿನಲ್ಲಿ ಈ 13 ವರ್ಷಗಳ ಹಿಂದೆ ಕೇವಲ ಖಾಸಗಿ ವಿದ್ಯಾ ಸಂಸ್ಥೆಗಳು ಮಾತ್ರ ಪದವಿ ಶಿಕ್ಷಣವನ್ನು ನೀಡುತ್ತಿದ್ದು, ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನಲ್ಲಿ ಹೆಚ್ಚು ಫೀ ಭರಿಸಿ ಪದವಿ ಶಿಕ್ಷಣವನ್ನು ಮಾಡುತ್ತಿದ್ದರು. ಹೀಗಿರುವಲ್ಲಿ ಕಳೆದ 13 ವರ್ಷಗಳ ಹಿಂದೆ ಭಟ್ಕಳ ತಾಲೂಕಿಗೆ ಒಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾಗಿ 13 ವರ್ಷಗಳಿಂದ ಸದರಿ ಕಾಲೇಜಿಗೆ ಸ್ವಂತ ಕಟ್ಟಡ ಹಾಗೂ ಸ್ಥಳ ಇಲ್ಲದೇ ಇರುವುದರಿಂದ ಬಾಡಿಗೆಯ ಆಧಾರದ ಮೇಲೆ ಭಟ್ಕಳದ ರಂಗಿಕಟ್ಟೆಯಲ್ಲಿರುವ ಒಂದು ಖಾಸಗಿ ಕಟ್ಟಡದಲ್ಲಿ ಕಾಲೇಜನ್ನು ನಡೆಸಲಾಗುತ್ತಿದೆ. ಇತ್ತಿಚಿಗೆ ಕಾಲೇಜಿನ ಕಟ್ಟಡ ಹಾಗೂ ಇತರ ಸೌಕರ್ಯಕ್ಕಾಗಿ ಸರ್ಕಾರದಿಂದ ಹಣ ಮಂಜೂರಾಗಿದ್ದು, ಕಾಲೇಜು ಕಟ್ಟಡವನ್ನು ಭಟ್ಕಳ ತಾಲೂಕು ಜಾಲಿ ಗ್ರಾಮದ ತಲಗೇರಿಯಲ್ಲಿ ನಿರ್ಮಿಸಲು ಉದ್ದೇಶಿಸಿ ಆ. 3 ರಂದು ಶಂಕುಸ್ಥಾಪನೆ ಉದ್ಘಾಟನೆ ಮಾಡಲಾಗಿದೆ.