ಉಡುಪಿ: ಉದ್ಯೋಗ ಹಾಗೂ ಅಭಿವೃದ್ಧಿಯ ಭರವಸೆ ನೀಡಿ ಊರಿಗೆ ಬಂದ ಕಂಪನಿಯೊಂದು ರೈತರ ಭೂಮಿಯನ್ನು ಕಬಳಿಸಿ ರಿಯಲ್ ಎಸ್ಟೇಟ್ ದಂಧೆಗೆ ಇಳಿದ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಫ್ರಾಡ್ ಕಂಪನಿ ಇದೀಗ ಗ್ರಾಮ ದೇವಸ್ಥಾನದ ದೇವರ ಕಾಡನ್ನು ನಾಶ ಮಾಡಲು ಮುಂದಾಗಿದ್ದು ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂದಿಕೂರು ಮುಗಿಲ ಕಾಡು ಪರಿಸರದಲ್ಲಿ ನೂರಾರು ವರ್ಷಗಳ ಹಿಂದೆಯೇ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆಂದೇ 114 ಎಕರೆ ವಿಸ್ತೀರ್ಣದ ಭೂಮಿಯನ್ನು ಬಿಟ್ಟು ಕೊಡಲಾಗಿತ್ತು. ಆದರೆ, ಈಗ ಈ ಕಾಡನ್ನು ರಿಯಲ್ ಎಸ್ಟೇಟ್ ದಂಧೆ ನಡೆಸಲು ನಾಶ ಮಾಡಲು ಮುಂದಾಗಿದ್ದಾರೆ. ನೂರಾರು ಬಗೆಯ ಜೀವ-ಜಂತುಗಳ ಆಶ್ರಯ ತಾಣವಾಗಿರುವ ಈ ಭೂಮಿಯನ್ನು ನೆಲಸಮಗೊಳಿಸಿ ರಿಯಲ್ ಎಸ್ಟೇಟ್ಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಜೀವ-ಜಂತುಗಳ ಸೇರಿದಂತೆ ಮುಗಿಲನ್ನು ಚುಂಬಿಸುವ ಬೃಹದಾಕಾರದ ಮರಗಳಿವೆ. ಉದ್ಯೋಗ ಹಾಗೂ ಅಭಿವೃದ್ಧಿಯ ಭರವಸೆ ನೀಡಿ 2007ರಲ್ಲಿ ಬಂದ ಸುಜ್ಲ್ಯಾನ್ (suzlon) ಎಂಬ ಕಂಪನಿಯು ಗಿಡ-ಮರಗಳನ್ನು ಕತ್ತರಿಸುವ ಮೂಲಕ ಇಲ್ಲಿನ ಸಂಪತ್ತನ್ನು ಹಾಳು ಮಾಡಲು ಮುಂದಾಯಿತು. ಇದನ್ನು ತಡೆಯಲೆಂದೇ ಆಗ ಕಾಡು ಉಳಿಸಲು ಗ್ರಾಮಸ್ಥರು ರಾಷ್ಟ್ರೀಯ ಹಸಿರು ಪ್ರಾಧಿಕಾರದ ಮೊರೆ ಹೋಗಬೇಕಾಯಿತು.
ಇದನ್ನೂ ಓದಿ : ಉಡುಪಿಯ ಸಾಂತಾವರದಲ್ಲಿ ವಿಜಯನಗರ ಶಾಸನ ಪತ್ತೆ
ಆದರೆ, ಜಿಲ್ಲೆಯ ಅರಣ್ಯ ಅಧಿಕಾರಿಗಳು ಇಲ್ಲಿ ಕೇವಲ ಕುರುಚಲು ಕಾಡು ಅಷ್ಟೇ ಇದೆ ಎಂದು ವರದಿ ನೀಡಿದ್ದರಿಂದ ಗ್ರೀನ್ ಟ್ರಿಬುನಲ್ ಈ ಕಾಡನ್ನು ಕಡಿಯಲು ಅನುಮತಿ ನೀಡಿತು. ಅರಣ್ಯವನ್ನು ಉಳಿಸಬೇಕಾಗಿದ್ದ ಅಧಿಕಾರಿಗಳೇ ಕಂಪನಿಯ ಒತ್ತಾಯಕ್ಕೆ ಮಣಿದು ಸಾವಿರಾರು ಮರಗಳ ಬುಡಕ್ಕೆ ಕೊಡಲಿ ಏಟು ನೀಡಿದರು ಎನ್ನುತ್ತಾರೆ ಸ್ಥಳೀಯ ಹೋರಾಟಗಾರರು.
ಈ ಕಂಪನಿ ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ, ಇದೀಗ ಕಂಪನಿಯನ್ನು ಹಂತ ಹಂತವಾಗಿ ಮುಚ್ಚಿ ಇರುವ ನೂರಾರು ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸುತ್ತಿದ್ದಾರೆ. ಗಾಳಿಯಂತ್ರದ ರೆಕ್ಕೆ ತಯಾರಿಸುವ ಈ ಸುಜ್ಲ್ಯಾನ್ ಕಂಪನಿಗೆ ಸರ್ಕಾರ 642 ಎಕರೆ ಭೂಮಿಯನ್ನು ಜನರಿಂದ ವಶಪಡಿಸಿಕೊಂಡು ನೀಡಿದೆ.
ನಂದಿಕೂರು ಮುಗಿಲ ಕಾಡು ಪರಿಸರ ಇದರಲ್ಲಿ 242 ಎಕರೆ ವಿಶೇಷ ವಿತ್ತ ವಲಯಕ್ಕೆ ಸೇರಿದ್ದಾಗಿದ್ದು ಉಳಿದ ಭೂಮಿ ಖಾಸಗಿಯಾಗಿದೆ. ಈ ಭೂಮಿಯನ್ನು ಕಂಪನಿ ಕಾನೂನುಬಾಹಿರವಾಗಿ ತನ್ನ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಸೆನ್ಸ್ ಒಂದಕ್ಕೆ 13 ಸಾವಿರ ರೂ.ಗೆ ಸಿಕ್ಕ ಈ ಭೂಮಿಯನ್ನು ಕಂಪನಿ ಈಗ ಲಕ್ಷಾಂತರ ರೂ.ಗೆ ಮಾರಾಟ ಮಾಡುತ್ತಿದೆ. ಎಂಕೆ ಇಂಡಸ್ಟ್ರಿ ಮತ್ತು ತ್ರಿಶೂಲ್ ಬಿಲ್ಡರ್ಸ್ ಎಂಬ ಎರಡು ಸಂಸ್ಥೆಗಳು ಇಲ್ಲಿ ಅರಣ್ಯನಾಶ ಮಾಡಿ ಜಾಗ ಸಮತಟ್ಟುಗೊಳಿಸುತ್ತಿವೆ. ಕಳೆದ ಹಲವು ತಿಂಗಳುಗಳಿಂದ ನಡೆದ ನಿರಂತರ ಮರಗಳ ಮಾರಣಹೋಮದಿಂದಾಗಿ ದಟ್ಟವಾಗಿದ್ದ ಅರಣ್ಯ ಈಗ ಬೋಳು ಗುಡ್ಡೆಯಾಗಿ ಬದಲಾಗಿದೆ ಎಂದು ಹೋರಾಟಗಾರರು ಅಸಹಾಯಕತೆ ವ್ಯಕ್ತಪಡಿಸಿದರು.