ಉಡುಪಿ: ಕರಾವಳಿ ಭಾಗದಲ್ಲಿ ರವಿ ಕಟಪಾಡಿ ಹೆಸರು ಚಿರಪರಿಚಿತ. ಇವರು ಅಷ್ಟಮಿ ಮತ್ತು ವಿಟ್ಲಪಿಂಡಿ ದಿನದಂದು ವೇಷ ಧರಿಸಿ ಜಿಲ್ಲೆಯ ಸುತ್ತಮುತ್ತಲಿನ ಊರೂರು ತಿರುಗಿ ಹಣ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ದೇಣಿಗೆಯನ್ನು ನಿನ್ನೆ 8 ಜನ ಬಡ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಜಿಲ್ಲೆಯ ಕಟಪಾಡಿ ನಿವಾಸಿಯಾಗಿರುವ ರವಿ, ಕಳೆದ 7 ವರ್ಷಗಳಿಂದ ವೇಷ ಧರಿಸುತ್ತಿದ್ದಾರೆ. ಊರೂರು ತಿರುಗಿ ಲಕ್ಷಾಂತರ ರೂ. ದೇಣಿಗೆ ಸಂಗ್ರಹಿಸಿದ್ದಾರೆ. ಸಾಮಾನ್ಯ ಕೂಲಿ ಕಾರ್ಮಿಕನಾದ ಇವರು, ಸಂಗ್ರಹವಾದ ಹಣವನ್ನು ತಾನು ಇಟ್ಟುಕೊಳ್ಳದೇ ಅನಾರೋಗ್ಯ ಪೀಡಿತ ಬಡ ಮಕ್ಕಳ ಚಿಕಿತ್ಸೆಗಾಗಿ ನೀಡುತ್ತಾ ಬಂದಿದ್ದಾರೆ. ಈ ಬಾರಿಯೂ ಸಂಗ್ರಹಿಸಿದ ಏಳು 7,17,350 ರೂಪಾಯಿಯನ್ನು 8 ಜನ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ವಿತರಿಸಿದ್ದಾರೆ.