ಉಡುಪಿ: ಇವರು ಆರ್ಥಿಕವಾಗಿ ಸದೃಢನಾಗಿಲ್ಲ. ಆದರೂ ವೇಷಧರಿಸಿ ಊರೂರು ಅಲೆದು ಅದರಿಂದ ಬಂದ ಲಕ್ಷಾಂತರ ರೂ. ಹಣವನ್ನು ಬಡ ರೋಗಿಗಳಿಗೆ ನೀಡುವ ಮೂಲಕ ಸಹಾಯ ಹಸ್ತ ಚಾಚುತ್ತಿದ್ದಾರೆ.
ಪ್ರತಿ ವರ್ಷ ಅಷ್ಟಮಿ ಬಂದಾಗ ಉಡುಪಿಯಲ್ಲಿ ರವಿ ಕಟಪಾಡಿ ಯಾವ ವೇಷ ಹಾಕುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಸಹಜ. ಯಾಕಂದ್ರೆ ಅವರ ವೇಷ ಭಿನ್ನ, ವಿಭಿನ್ನವಾಗಿರುವುದಷ್ಟೇ ಅಲ್ಲದೇ ಆಕರ್ಷಕವಾಗಿರುತ್ತದೆ. ಬಡ ರೋಗಿಗಳಿಗೆ ಸಹಾಯ ಮಾಡಬೇಕು ಎನ್ನುವ ಇವರು ಇತರರಿಗೆ ಮಾದರಿ.
ಡಾರ್ಕ್ ಅಲೈಟ್ ಆಗಿ ಮಿಂಚಿದ ವೇಷಧಾರಿ ರವಿ ಕಟಪಾಡಿ ಬರೋಬ್ಬರಿ 72 ಲಕ್ಷ ರೂ. ದೇಣಿಗೆ ಸಂಗ್ರಹ:
ಜಿಲ್ಲೆಯ ಕಟಪಾಡಿ ನಿವಾಸಿಯಾಗಿರುವ ರವಿ, ಕಳೆದ 7 ವರ್ಷಗಳಿಂದ ಅಷ್ಟಮಿ ಮತ್ತು ವಿಟ್ಲಪಿಂಡಿ ದಿನದಂದು ವೇಷ ಧರಿಸುತ್ತಿದ್ದಾರೆ. ಊರೂರು ತಿರುಗಿ ಲಕ್ಷಾಂತರ ರೂ. ದೇಣಿಗೆ ಸಂಗ್ರಹಿಸಿದ್ದಾರೆ. ಸಾಮಾನ್ಯ ಕೂಲಿ ಕಾರ್ಮಿಕನಾದ ಇವರು, ಕಳೆದ ಏಳು ವರ್ಷಗಳಿಂದ ಥರಹೇವಾರಿ ವೇಷ ಹಾಕಿ ಸುಮಾರು 72 ಲಕ್ಷ ರೂ. ಸಂಗ್ರಹಿಸಿದ್ದಾರೆ. ವಿಶೇಷ ಅಂದ್ರೆ ಸಂಗ್ರಹಿಸಿದ ಎಲ್ಲಾ ಹಣವನ್ನು ಬಡ, ಅನಾರೋಗ್ಯ ಪೀಡಿತ 33 ಮಕ್ಕಳಿಗೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ಡಾರ್ಕ್ ಅಲೈಟ್ ಆಗಿ ಮಿಂಚಿದ ರವಿ:
ಕೊರೊನಾ ಕಾರಣದಿಂದ ಈ ಬಾರಿ ಅಷ್ಟಮಿ ವೇಷಕ್ಕೆ ಅವಕಾಶ ಇರಲಿಲ್ಲ. ಆದರೂ ಸಮಾಜಸೇವಕ ರವಿಯವರಿಗೆ ವಿಶೇಷ ಅವಕಾಶ ನೀಡಲಾಗಿತ್ತು. ಈ ಅವಕಾಶ ಬಳಸಿಕೊಂಡ ರವಿ, ಈ ಬಾರಿ ಹಾಲಿವುಡ್ ಸಿನಿಮಾವೊಂದರ ಫ್ಯಾಂಟಸಿ ವೇಷ ಡಾರ್ಕ್ ಅಲೈಟ್ ಆಗಿ ಎರಡು ದಿನಗಳ ಕಾಲ ಉಡುಪಿಯಲ್ಲಿ ಓಡಾಡಿ ಲಕ್ಷಾಂತರ ರೂ. ಸಂಗ್ರಹಿಸಿದ್ದಾರೆ. ಲಕ್ಷ ಲಕ್ಷ ಹಣ ಸಂಗ್ರಹವಾದರೂ ಕೂಡ ಒಂದು ರೂಪಾಯಿಯನ್ನು ಕೂಡ ರವಿ ಸ್ವಂತ ಖರ್ಚಿಗೆ ಬಳಸಿಕೊಂಡಿಲ್ಲ. ಅಷ್ಟರ ಮಟ್ಟಿಗೆ ನಿಸ್ವಾರ್ಥ ಸೇವೆ ಮಾಡಿ, ಉಡುಪಿ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಕೆಬಿಸಿಯಲ್ಲಿ ಭಾಗಿ:
ಅಂದಹಾಗೆ ರವಿ ಅವರ ಮಾನವೀಯ ಕಾಳಜಿ ಗಮನಿಸಿ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿ ಕೊಡುವ 'ಕರೋಡ್ ಪತಿ' ಶೋನಲ್ಲಿ ಕೂಡ ಅವಕಾಶ ನೀಡಲಾಗಿತ್ತು. ಅದರಲ್ಲಿ ಬಂದ ಎಂಟು ಲಕ್ಷ ರೂಪಾಯಿಯನ್ನು ಕಷ್ಟದಲ್ಲಿರುವವರಿಗೆ ಕೊಟ್ಟು ಉದಾರತೆ ಮೆರೆದಿದ್ದಾರೆ.
ಒಟ್ಟಿನಲ್ಲಿ ಕಷ್ಟದಲ್ಲಿರುವವರ ಕೈಹಿಡಿಯಲು ಕೋಟಿ ಕೋಟಿ ಹಣ ಬೇಡ, ಬದಲಿಗೆ ಒಳ್ಳೆಯ ಮನಸಿದ್ದರೆ ಸಾಕು. ಇಂತಹ ಕೋಟಿಗೊಬ್ಬ ಮನಸ್ಸಿನ ಉಡುಪಿಯ ರವಿ ಕಟಪಾಡಿ ರಿಯಲ್ ಹೀರೋ ಅಂದ್ರೆ ತಪ್ಪಾಗಲಿಕ್ಕಿಲ್ಲ.