ಉಡುಪಿ:ಜಿಲ್ಲೆಯ ಮಾಹೆ ವಿವಿಯ ಎಂಐಟಿಯ ಹಳೆ ವಿದ್ಯಾರ್ಥಿನಿ ಎಂ.ಎಸ್.ರಶ್ಮಿ ಸಾಮಂತ್, ಲಂಡನ್ನ ಪ್ರತಿಷ್ಟಿತ ಆಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.
ರಶ್ಮಿ ಸಾಮಂತ್ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಉಡುಪಿಯಎಂಐಟಿಯ 2016ರಿಂದ 2020ರವರೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಪ್ರಸ್ತುತ ಆಕ್ಸ್‌ಫರ್ಡ್ ವಿವಿಯ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್ ಎಂಬ ವಿಷಯದಲ್ಲಿ ಎಂಎಸ್ಸಿ ಪದವಿ ವಿದ್ಯಾರ್ಥಿಯಾಗಿದ್ದಾರೆ.
ರಶ್ಮಿ ಸಾಮಂತ್ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಿವಿಯ ಪರಿಸರದಲ್ಲಿರುವ ಕ್ರಿಸ್ಟೋಫರ್ ಕೊಡ್ರಿಂಗ್ಟನ್ ಸೇರಿದಂತೆ ಸಾಮ್ರಾಜ್ಯ ಶಾಹಿಯ ಎಲ್ಲ ಪ್ರತಿಮೆಗಳನ್ನು ತೆಗೆದುಹಾಕುವ, ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಸಾಂಕ್ರಾಮಿಕದ ಸಂಪೂರ್ಣ ನಿಯಂತ್ರಣದ ಘೋಷಣೆವರೆಗೆ ವಿದ್ಯಾರ್ಥಿಗಳ ವಲಸೆ ನಿಯಮಗಳನ್ನು ಸಡಿಲಿಸುವ, ಮಾನಸಿಕ ಆರೋಗ್ಯ ಕಾರ್ಯ ಯೋಜನೆಗೆ ಹೆಚ್ಚಿನ ಹಣಕ್ಕಾಗಿ ಲಾಬಿ ನಡೆಸುವ ಮತ್ತು ಶೀಘ್ರವೇ ಕಾಲೇಜು ಕ್ಯಾಂಪಸ್ನಿಂದ ಪರಿಸರಕ್ಕೆ ಮಾರಕ ಇಂಧನಗಳನ್ನು ದೂರ ಮಾಡುವ ನಾಲ್ಕು ಭರವಸೆಗಳನ್ನು ನೀಡಿದ್ದಾರೆ.
ಚುನಾವಣೆಯಲ್ಲಿ ಒಟ್ಟು 4 ಮಂದಿ ಸ್ಪರ್ಧಿಸಿದ್ದು, ರಶ್ಮಿ ಒಟ್ಟು 3,708 ಮತಗಳಲ್ಲಿ 1,966 (ಶೇ 53) ಮತಗಳನ್ನು ಗಳಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರು ಗಳಿಸಿದ ಒಟ್ಟು ಮತಗಳು ಇತರ ಮೂರು ಮಂದಿ ಗಳಿಸಿದ ಒಟ್ಟು ಮತಗಳಿಗಿಂತಲೂ ಹೆಚ್ಚಾಗಿದ್ದವು.