ಉಡುಪಿ: ಬಗೆಬಗೆಯ ಖಾದ್ಯಗಳಿಗೆ ಕರಾವಳಿ ಫೇಮಸ್. ಕರಾವಳಿಯ ತಿನಿಸುಗಳಿಗೆ ವಿಶ್ವದಲ್ಲೇ ಭಾರಿ ಬೇಡಿಕೆಯಿದೆ. ಸದ್ಯ ಕಡಲೂರಿನಲ್ಲಿ ಜಡಿ ಮಳೆಯೊಂದಿಗೆ ಗುಡುಗು ಸದ್ದು ಮಾಡುತ್ತದೆ. ಇಂತಹ ಗುಡುಗಿಗೆ ಹುಟ್ಟುವ ಕಲ್ಲಣಬೆ ರುಚಿ ಸವಿಯುವುದೇ ಒಂದು ಅದ್ಭುತ ಅನುಭವ.
ಕರಾವಳಿಯ ತಿಂಡಿ ತಿನಿಸುಗಳಿಗೆ ಮಾರು ಹೋಗದ ಖಾದ್ಯ ಪ್ರಿಯರೇ ಇಲ್ಲ. ಅಂತಹ ವಿಶೇಷ ಖಾದ್ಯಗಳಲ್ಲಿ ಕಲ್ಲಣಬೆ ಕೂಡ ಒಂದು. ಇದನ್ನು ಕರಾವಳಿಯಲ್ಲಿ ಕಲಲಾಂಬು ಎನ್ನುತ್ತಾರೆ. ಮಳೆಗಾಲದಲ್ಲಿ ಮಾತ್ರ ಈ ರುಚಿ ತಯಾರಾಗುತ್ತದೆ.
ಮಳೆಗಾಲದಲ್ಲಿ ಜೋರಾಗಿ ಗುಡುಗು ಬಂದಾಗ ಗುಡ್ಡ ಪ್ರದೇಶದ, ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ, ಮಣ್ಣಿನ ಮೇಲ್ಪದರದಲ್ಲಿ ಈ ಕಲ್ಲಣಬೆ ಹುಟ್ಟಿಕೊಳ್ಳತ್ತದೆ. ಮಳೆಗಾಲದಲ್ಲಿ ಉಡುಪಿ ಭಾಗದ ಸರಳಬೆಟ್ಟು ಪರಿಸರದಲ್ಲಿ ಹೆಚ್ಚಾಗಿ ಕಂಡುಬರುವ ಈ ಕಲ್ಲಣಬೆಯನ್ನು, ಇಲ್ಲಿನ ಯುವಕರ ತಂಡವೊಂದು ಬೆಟ್ಟಕ್ಕೆ ಹತ್ತಿ ಹುಡುಕಾಡುತ್ತಾರೆ. ಸಣ್ಣ ಕೋಲಿನ ಸಹಾಯದಿಂದ ಅಗೆದು ಕೊರ ತೆಗೆಯುತ್ತಾರೆ.