ಉಡುಪಿ: ಕೇಸರಿಯನ್ನು ವಿರೋಧಿಸಿದ್ರೆ ಇನ್ನಷ್ಟು ಮೂಲೆ ಗುಂಪಾಗುತ್ತೀರಿ ಎಂದು ಉಡುಪಿ ಶಾಸಕ ರಘುಪತಿ ಭಟ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.
ಕಾಪು ಠಾಣೆಯ ಪೊಲೀಸರು ಕೇಸರಿ ಉಡುಪು ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ, ಪೊಲೀಸರ ಕೈಗೆ ತ್ರಿಶೂಲ ಕೊಟ್ಟುಬಿಡಿ ಎಂದು ಟ್ವೀಟ್ ಮಾಡಿದ್ದರು. ಈ ಸಂಬಂಧ ಉಡುಪಿ ಶಾಸಕ ರಘುಪತಿ ಭಟ್ ಪೊಲೀಸ್ ಸಿಬ್ಬಂದಿಯ ಬೆಂಬಲಕ್ಕೆ ನಿಂತು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯಗೆ ಶಾಸಕ ರಘುಪತಿ ಭಟ್ ಟಾಂಗ್ ನಿಮಗೆ ಕೇಸರಿ ಕಂಡರೆ ಯಾಕೆ ಅಷ್ಟು ಭಯ? ಟಿಪ್ಪುವಿನ ಪೋಷಾಕು ಧರಿಸಿ, ಖಡ್ಗ ಹಿಡಿದಿಲ್ಲವೇ? ಪಂಚೆ ಶಾಲು, ಟೋಪಿ ಧರಿಸಿದಾಗ ಭಾವೈಕ್ಯತೆ ನೆನಪಾಗಲಿಲ್ಲವೇ?ಪೊಲೀಸರು ಕೇಸರಿ ಬಟ್ಟೆ ಧರಿಸಿದರೆ ನಿಮಗೆ ಏನು ಸಮಸ್ಯೆ? ಕೇಸರಿ ತ್ಯಾಗದ ಸಂಕೇತ. ದೇಶದಲ್ಲಿ ಕೇಸರಿಯನ್ನು ಹಿಂದಿನಿಂದಲೂ ಪೂಜಿಸಿಕೊಂಡು ಬಂದಿದ್ದೇವೆ. ಅಲ್ಪಸಂಖ್ಯಾತರ ಮತಬ್ಯಾಂಕ್ ಉದ್ದೇಶವಿಟ್ಟುಕೊಂಡು ಕೇಸರಿಯನ್ನು ದ್ವೇಷಿಸಿದ್ದೀರಿ ಎಂದು ಹರಿಹಾಯ್ದಿದ್ದಾರೆ.
ಕೇಸರಿಯನ್ನು ದ್ವೇಷಿಸಿದ್ದಕ್ಕೆ ಕಾಂಗ್ರೆಸ್ಗೆ ಈ ಪರಿಸ್ಥಿತಿ ಬಂದಿದೆ. ಕೇಸರಿಯನ್ನು ವಿರೋಧಿಸಿದರೆ ಇನ್ನಷ್ಟು ಮೂಲೆಗುಂಪಾಗುತ್ತೀರಿ. ಹಬ್ಬದ ದಿನ ಪೊಲೀಸರು ಕೇಸರಿ ಧರಿಸಿದ್ದನ್ನು ಸಮರ್ಥಿಸಿಕೊಳ್ಳುತ್ತೇನೆ. ನಮ್ಮ ರಾಷ್ಟ್ರ ಧ್ವಜದಲ್ಲಿ ಕೇಸರಿ ಬಣ್ಣ ಇದೆ. ಕೇಸರಿ ಧರಿಸಿದ್ದು ಅಪರಾಧವೇನಲ್ಲ. ಸಿದ್ದರಾಮಯ್ಯ ಮಾನಸಿಕತೆ ಈ ಟ್ವೀಟ್‌ನಿಂದ ಗೊತ್ತಾಗುತ್ತೆ ಎಂದು ಶಾಸಕ ರಘುಪತಿ ಭಟ್ ವಾಗ್ದಾಳಿ ನಡೆಸಿದ್ದಾರೆ.
ತ್ರಿಶೂಲ ಯಾರನ್ನೂ ಕೊಲ್ಲುವ ಆಯುಧವಲ್ಲ. ತ್ರಿಶೂಲ ಹಿಂದೂಗಳು ಆರಾಧಿಸುವ ಆಯುಧ. ಪೊಲೀಸರಿಗೆ ತ್ರಿಶೂಲ ಕೊಡುವುದು ಒಳ್ಳೆಯ ಸಂಗತಿ. ಸಿದ್ದರಾಮಯ್ಯನವರು ಹೇಳಿರುವುದು ಸರಿಯಾಗಿದೆ ಅಂತಾ ಅವರು ವ್ಯಂಗ್ಯವಾಡಿದ್ದಾರೆ.