ಉಡುಪಿ: ದೇಶವು 70ನೇ ಸಂವಿಧಾನ ದಿನಾಚರಣೆ ಆಚರಿಸಿದ ದಿನವೇ ಪುರಿಯ ಶಂಕರಾಚಾರ್ಯ ನಿಶ್ಚಲಾನಂದ ಸ್ವಾಮೀಜಿ ಅವರು ಸಂವಿಧಾನ ಒಪ್ಪಲು ಸಾಧ್ಯವಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ಪೇಜಾವರ ಶ್ರೀಗಳನ್ನು ಭೇಟಿಯಾದ ಪುರಿ ಶ್ರೀಗಳು ಪೇಜಾವರ ಶ್ರೀಗಳ ಜೊತೆ ಅಯೋಧ್ಯೆ ತೀರ್ಪಿನ ಕುರಿತು ಮಾತನಾಡುತ್ತಾ, ನಾವು ಸಂವಿಧಾನವನ್ನು ಪಾಲಿಸಿದರೆ ವರ್ಣ ವ್ಯವಸ್ಥೆ ಎಲ್ಲಿ ಹೋಗಬೇಕು? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪೇಜಾವರ ಶ್ರೀಗಳು, ಆದರೆ ಸಮಯ ಸಂದರ್ಭ ಹಾಗಿದೆ. ನಾವು ಸಂವಿಧಾನ ಪಾಲಿಸಲೇಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಿ ಶ್ರೀ, ನಮಗೆ ಹೇಗೆ ಬೇಕೋ ಹಾಗೆ ಸಂದರ್ಭವನ್ನು ನಾವು ಸೃಷ್ಟಿಸಿಕೊಂಡು ನಾವೇ ರಾಜರಾಗಿ ಉಳಿಯಬೇಕು ಎಂದು ಹೇಳಿದರು.
ಸುಪ್ರೀಂ ಕೋರ್ಟ್ನ ತೀರ್ಪನ್ನು ನಾನು ಒಪ್ಪಲು ಸಾಧ್ಯವಿಲ್ಲ. ನಿಮ್ಮಂತಹ ವೀರ ಸಂತರು, ಹಿಂದೂ ಧರ್ಮ ದುರ್ಬಲವಾಗದಂತೆ ನೊಡಿಕೊಳ್ಳಬೇಕೆಂದು ಪೇಜಾವರ ಶ್ರೀಗಳಿಗೆ ಅವರು ಮನವಿ ಮಾಡಿದರು.
ಪೇಜಾವರ ಶ್ರೀಗಳನ್ನು ಭೇಟಿಯಾದ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸ್ವಾಮೀಜಿ ಸಂತರು ಕೂಡಾ ರಾಜಕಾರಣಿಗಳನ್ನು ಅನುಸರಿಸುತ್ತಿರುವುದು ಶೋಚನೀಯ. ರಾಜಕಾರಣಿಗಳು ಸಂತರನ್ನು ಅನುಸರಿಸುವಂತಾಗಬೇಕು ಎಂದು ಬೇಸರ ವ್ಯಕ್ತಪಡಿಸಿದರು.