ಉಡುಪಿ :ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರಿಗೆ ತವರು ಜಿಲ್ಲೆ ಉಡುಪಿಯಲ್ಲಿ ಅಂತಿಮ ನಮನ ಸಲ್ಲಿಸಲಾಗಿದೆ. ರಾಜ್ಯ ಮತ್ತು ದೆಹಲಿಗೆ ಕೊಂಡಿಯಂತಿದ್ದ ಹಿರಿಯ ನಾಯಕನನ್ನು ಕಳೆದುಕೊಂಡು ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಉಡುಪಿ ಜಿಲ್ಲೆಯೂ ಅನಾಥವಾದಂತಾಗಿದೆ.
ಸೋಮವಾರ ನಿಧನರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಇಂದು ಉಡುಪಿಗೆ ತರಲಾಯಿತು. ದೆಹಲಿ ಮಟ್ಟದ ಹೈಕಮಾಂಡ್ ನಾಯಕನಾಗಿ ಬೆಳೆದರೂ, ತವರು ಜಿಲ್ಲೆ ಉಡುಪಿಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಆಸ್ಕರ್ ಪಾರ್ಥಿವ ಶರೀರಕ್ಕೆ ನಗರದ ಪ್ರಮುಖ ಸ್ಥಳಗಳಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.
ಆಸ್ಕರ್ ಫರ್ನಾಂಡಿಸ್ಗೆ ರಾಜಕೀಯ ನಾಯಕರ ನಮನ 9.30ರ ವೇಳೆಗೆ ಮಂಗಳೂರಿನ ಆಸ್ಪತ್ರೆಯಿಂದ ನೇರವಾಗಿ ಪಾರ್ಥಿವ ಶರೀರವನ್ನು ಉಡುಪಿಯ ಕವಿ ಮುದ್ದಣ ರಸ್ತೆಯಲ್ಲಿರುವ ಶೋಕಮಾತಾ ಇಗರ್ಜಿಗೆ ತರಲಾಯಿತು. ಮಾರ್ಗಮಧ್ಯದಲ್ಲಿ ಆಸ್ಕರ್ ಅಭಿಮಾನಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಆಸ್ಕರ್ ಕುಟುಂಬ ನೆಚ್ಚಿಕೊಂಡಿದ್ದ ಶೋಕಮಾತಾ ಇಗರ್ಜಿಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು. ವಿವಿಧ ಧರ್ಮಗುರುಗಳ ಉಪಸ್ಥಿತಿಯಲ್ಲಿ ಅಂತಿಮ ಪ್ರಾರ್ಥನೆ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಜಲಪ್ರೋಕ್ಷಣೆ ಮಾಡುವ ಮೂಲಕ ಸದ್ಗತಿಗಾಗಿ ಪ್ರಾರ್ಥಿಸಲಾಯಿತು. ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಪ್ರಾಂತ್ಯದ ಅನೇಕ ಧರ್ಮಗುರುಗಳು, ಸದಸ್ಯರು ಭಾಗಿಯಾಗಿದ್ದರು. ವಿಶೇಷ ಬಲಿಪೂಜೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಂತಿಮ ದರ್ಶನ ಪಡೆದ ಉಡುಪಿ ಜನತೆ:ಶೋಕಮಾತಾ ಚರ್ಚ್ನಲ್ಲಿ ಪೂಜೆ ಮುಗಿದ ಬಳಿಕ ಪಾರ್ಥಿವ ಶರೀರವನ್ನು ಆಸ್ಕರ್ ಫರ್ನಾಂಡಿಸ್ ನಿವಾಸಕ್ಕೆ ತರಲಾಯಿತು. ಬ್ರಹ್ಮಗಿರಿಯಲ್ಲಿರುವ ಈ ಮನೆಯಲ್ಲಿ ಆಸ್ಕರ್ ಫರ್ನಾಂಡಿಸ್ ಹುಟ್ಟಿ ಬೆಳೆದಿದ್ದರು. 5 ಬಾರಿ ಲೋಕಸಭಾ ಸದಸ್ಯ, 4 ಬಾರಿ ರಾಜ್ಯಸಭಾ ಸದಸ್ಯರಾದ ಬಳಿಕವೂ, ಈ ಮನೆಯ ಮೂಲಕವೇ ಉಡುಪಿಯ ಸಂಪರ್ಕ ಹೊಂದಿದ್ದರು. ಇದೇ ಮನೆಯ ಸುತ್ತಮುತ್ತಲಿನ ಗದ್ದೆಯಲ್ಲಿ ಕೃಷಿ ಮಾಡಿ ಪ್ರಶಸ್ತಿಯನ್ನು ಪಡೆದಿದ್ದರು.
ಮನೆಯನ್ನು ಪಕ್ಷಕ್ಕೆ ಬಿಟ್ಟುಕೊಟ್ಟು ಜಿಲ್ಲಾ ಕಚೇರಿ ಮಾಡಿದ್ದರು. ಇದೇ ಕಾರಣಕ್ಕೆ ಅಂತಿಮ ಪ್ರಯಾಣದ ವೇಳೆ ಪಾರ್ಥಿವ ಶರೀರವನ್ನು ಮನೆಯಲ್ಲಿರಿಸಿ ಪ್ರಾರ್ಥಿಸಲಾಯಿತು. ಕುಟುಂಬ ಸದಸ್ಯರು ಆತ್ಮೀಯ ಅಭಿಮಾನಿಗಳು ಈ ವೇಳೆ ಭಾಗಿಯಾಗಿದ್ದರು. ಅಲ್ಲಿಂದ ನೇರವಾಗಿ ಪಾರ್ಥಿವ ಶರೀರವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕೊಂಡೊಯ್ಯಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಗಣ್ಯರು ಕಾರ್ಯಕರ್ತರು ಉಡುಪಿ ಜಿಲ್ಲೆಯ ನಾಗರಿಕರು ಬಂದು ಅಂತಿಮ ದರ್ಶನ ಪಡೆದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಆಸ್ಕರ್ ಕಾಂಗ್ರೆಸ್ ಪಕ್ಷಕ್ಕೆ, ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಸ್ಮರಿಸಿ ಕೊಂಡಾಡಿದರು. ಅವರ ಸ್ಮರಣೆಯಲ್ಲಿ ಯಾವುದಾದರೂ ಯೋಜನೆ ಹಮ್ಮಿಕೊಳ್ಳುವ ಭರವಸೆಯಿತ್ತರು. ಈ ನಡುವೆ ಚರ್ಚ್ ಆವರಣಕ್ಕೆ ಆಗಮಿಸಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಸರ್ಕಾರದ ವತಿಯಿಂದ ಅಂತಿಮ ನಮನ ಸಲ್ಲಿಸಿದರು.
ಇದನ್ನೂ ಓದಿ:ಆಸ್ಕರ್ ಫರ್ನಾಂಡಿಸ್ ವಿಧಿವಶ: ಮಂಗಳೂರಿನಿಂದ ಉಡುಪಿಗೆ ಪಾರ್ಥೀವ ಶರೀರ ರವಾನೆ