ಉಡುಪಿ: ಮಹಿಳೆಯರು ಮತ್ತು ಮುಟ್ಟಿನ ಹೇಳಿಕೆಗೆ ಪ್ರಗತಿಪರರ ಆಕ್ಷೇಪ ಕುರಿತು ಎಸ್ ಎಲ್ ಭೈರಪ್ಪ ಅವರನ್ನು ಟೀಕಿಸಿದ ಪ್ರಗತಿಪರರಿಗೆ ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸಿ ಟಿ ರವಿ ಟಾಂಗ್ ನೀಡಿದ್ದಾರೆ.
ಭೈರಪ್ಪ ಭಾಷಣ ಮಾಡುವಾಗ ನಾನು ಭೈರಪ್ಪ ಅವರ ಪಕ್ಕದಲ್ಲೇ ಇದ್ದೇ.. ಅವರು ತಪ್ಪೇನೂ ಮಾತಾಡಿಲ್ಲ. ನಾಡದೇವಿಗೆ ಕೈ ಮುಗಿಯದ ನಾಸ್ತಿಕರು ಕೂಡಾ ಉದ್ಘಾಟನೆ ಮಾಡಿದ್ದಾರೆ. ತಮ್ಮ ಶ್ರದ್ಧೆ ತೋರ್ಪಡಿಸಿದ ಭೈರಪ್ಪ ಕೋಟಿ ಪಾಲು ಮೇಲಿದ್ದಾರೆ ಎಂದು ಅವರು ಹೇಳಿದರು.
ನಾಸ್ತಿಕರನ್ನು ಕರೆದು ಹಿಂದಿನ ಸರ್ಕಾರ ಅಪಮಾನ ಮಾಡಿತ್ತು. ಭೈರಪ್ಪ ಶಬರಿಮಲೆ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದ್ದಾರೆ ಅಷ್ಟೇ.. ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದೇನೂ ಹೇಳಿಲ್ಲ. ನಮ್ಮ ದೇಶದಲ್ಲಿ ಗಂಡು ದೇವತೆಗಳಿಗಿಂತ ಹೆಣ್ಣು ದೇವತೆಗಳೇ ಹೆಚ್ಚಿದ್ದಾರೆ. ಹೆಣ್ಣು ದೇವತೆಯೇ ಇಲ್ಲದಂತಹವರು ಅವರ ಬಗ್ಗೆ ಯೋಚನೆ ಮಾಡಲಿ ಸಾಕು ಎಂದಿದ್ದಾರೆ.
ನೆರೆ ಪರಿಹಾರ ವಿಚಾರ ಕುರಿತು ಮಾತನಾಡಿದ ಅವರು, ಹತ್ತು ರಾಜ್ಯಗಳಲ್ಲಿ ಮಳೆಯಿಂದ ಹಾನಿಯಾಗಿದೆ. ಹತ್ತು ರಾಜ್ಯಕ್ಕೆ ಮಧ್ಯಂತರ ಪರಿಹಾರ ಕೊಟ್ಟಿದ್ದಾರೆ. ಪೂರ್ಣ ಪರಿಹಾರ ಕೊಟ್ಟಿಲ್ಲ. ಚುನಾವಣೆ ಎದುರಿಸಲಿರುವ ಮಹಾರಾಷ್ಟ್ರಕ್ಕೂ ಪರಿಹಾರ ಕೊಟ್ಟಿಲ್ಲ. ಪ್ರಧಾನಿಯ ದೃಷ್ಟಿಯಲ್ಲಿ ಎಲ್ಲಾ ರಾಜ್ಯಗಳೂ ಸಮಾನ. ದೇಶದ 132 ಕೋಟಿ ಜನರೂ ಅವರಿಗೆ ಸಮಾನ. ಈ ವಿಚಾರದಲ್ಲಿ ವಿಪಕ್ಷಗಳು ಅನಗತ್ಯ ರಾಜಕಾರಣ ಮಾಡುತ್ತಿವೆ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಒಂದೂ ಸೀಟು ಗೆಲ್ಲದ ಕೇರಳ, ಒಂದೇ ಸೀಟು ಗೆದ್ದ ತಮಿಳುನಾಡುಗೂ ಮೋದಿ ಪರಿಹಾರ ಕೊಟ್ಟಿದ್ದಾರೆ. ನಮಗೂ ಕೊಡ್ತಾರೆ ಒಂದು ರಾಜ್ಯಕ್ಕೆ ಕೊಟ್ಟು ಇನ್ನೊಂದು ರಾಜ್ಯಕ್ಕೆ ಕೊಡದೇ ಇದ್ರೆ ರಾಜಕಾರಣ ಅನ್ನಬಹುದಿತ್ತು. ಹಾಗೇನಾದ್ರೂ ಆಗಿದ್ರೆ ನಾವೇ ಧ್ವನಿ ಎತ್ತುತ್ತೇವೆ ಸಂಶಯ ಬೇಡ. ಅವಶ್ಯಕತೆ ಬಿದ್ರೆ ನಮ್ಮ ಸಂಸದರು ಮುಖ್ಯಮಂತ್ರಿನೂ ಪರಿಹಾರ ಕೇಳಲು ಹೋಗ್ತಾರೆ. ಕರ್ನಾಟಕದ ಹಿತಾಸಕ್ತಿ ಬಿಟ್ಟು ರಾಜಕಾರಣ ಮಾಡಲ್ಲ ಎಂದು ಹೇಳಿದರು.