ಉಡುಪಿ: ಹಿಜಾಬ್ ಹೈಕೋರ್ಟ್ ತೀರ್ಪು ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ಮರು ಪ್ರಶ್ನೆ ಮಾಡುತ್ತೇವೆ. ನಮಗೆ ನ್ಯಾಯಾಲಯದ ಮೇಲೆ ಬಹಳ ನಿರೀಕ್ಷೆ ಇತ್ತು. ವ್ಯವಸ್ಥೆ ಮೇಲೆ ಬಹಳ ಭರವಸೆ ಇತ್ತು. ಧರ್ಮದಲ್ಲಿ ನಮಗೆ ಹಿಜಾಬ್ ಧರಿಸಲು ಅವಕಾಶವಿದೆ. ಎಲ್ಲಾ ಮುಸ್ಲಿಂ ಮಹಿಳೆಯರಿಗೆ ತಲೆ ಮತ್ತು ಎದೆಯನ್ನು ಮುಚ್ಚಿಕೊಳ್ಳುವ ಅವಕಾಶ ಇದೆ. ಆದರೆ ಹೈಕೋರ್ಟ್ನಲ್ಲಿ ತೀರ್ಪು ನಮ್ಮ ವಿರುದ್ಧ ಬಂದಿದೆ ಎಂದು ಹಿಜಾಬ್ ಪರ ಹೋರಾಟಗಾರ್ತಿ ಆಲಿಯಾ ಅಸಾದಿ ಹೇಳಿದ್ದಾರೆ.
ಹೈಕೋರ್ಟ್ ತೀರ್ಪಿನ ನಂತರ ಉಡುಪಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಮಗೆ ನ್ಯಾಯ ಸಿಗುವ ಭರವಸೆ ಇತ್ತು. ನಾವು ಹಿಜಾಬ್ ತೆಗೆದು ಕ್ಲಾಸ್ ಒಳಗೆ ಹೋಗಲ್ಲ. ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಕುರಾನ್ನಲ್ಲಿ ದೇಹವನ್ನು ಮುಚ್ಚಿಕೊಳ್ಳಬೇಕೆಂಬ ಉಲ್ಲೇಖ ಇದೆ. ಹಿಜಾಬ್ ಅವಶ್ಯಕತೆ ಇಲ್ಲದಿದ್ದರೆ, ನಾವು ಅದನ್ನು ಧರಿಸುತ್ತಿರಲಿಲ್ಲ ಎಂದಿದ್ದಾರೆ.
ಹಿಜಾಬ್ ಪರ ವಿದ್ಯಾರ್ಥಿನಿಯರ ಮಾಧ್ಯಮಗೋಷ್ಟಿ ಹಿಜಾಬ್ ಮುಖ್ಯ ಅಲ್ಲವಾದರೆ, ನಾವು ಹೋರಾಟವನ್ನು ಮಾಡುತ್ತಿರಲಿಲ್ಲ. ನಮಗೆ ಶಿಕ್ಷಣ ಜೊತೆ ಹಿಜಾಬ್ ಕೂಡಾ ಬೇಕು. ರಾಜಕೀಯ ಲಾಭಕ್ಕೆ ಹಿಜಾಬ್ ವಿಚಾರವನ್ನು ಕಮ್ಯೂನಲ್ ಮಾಡಲಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಹಿಜಾಬ್ ಅನ್ನು ರಾಜಕೀಯ ದುರುದ್ದೇಶದಿಂದ ದೊಡ್ಡ ವಿವಾದ ಮಾಡಿದರು. ಎಲ್ಲರ ಶಿಕ್ಷಣಕ್ಕೆ ಬಹಳ ಸಮಸ್ಯೆಯಾಗಿದೆ. ಹಿಜಾಬ್ಗೆ ತಡೆ ನೀಡಿರುವುದು ನಮ್ಮ ಶಿಕ್ಷಣಕ್ಕೆ ತಡೆ ನೀಡಿದಂತೆ ಆಗಿದೆ. ನಮಗೆ ಧರ್ಮ ಮತ್ತು ಶಿಕ್ಷಣ ಎರಡೂ ಬಹಳ ಮುಖ್ಯ ಎಂದಿದ್ದಾರೆ.
ಅಂಬೇಡ್ಕರ್ ಇದ್ದಿದ್ದರೆ ಮರುಗುತ್ತಿದ್ದರು:ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ. ಅವರು ಬದುಕಿದ್ದರೆ ಇಂದು ಕಣ್ಣೀರು ಹಾಕುತ್ತಿದ್ದರು. ಸಂವಿಧಾನದ ಈಗಿನ ಪರಿಸ್ಥಿತಿ ನೋಡಿ ಮರುಗುತಿದ್ದರು ಎಂದು ಹಿಜಾಬ್ ಹೋರಾಟಗಾರ್ತಿ ಅಲ್ಮಾಸ್ ಹೇಳಿದ್ದಾರೆ. ಹಿಜಾಬ್ ಹಕ್ಕಿಗಾಗಿ ಮುಂದಿನ ಹೋರಾಟ ಮಾಡುತ್ತೇವೆ. ನಮ್ಮ ಸಂವಿಧಾನಾತ್ಮಕ ಹಕ್ಕಿಗಾಗಿ ಹೋರಾಡುತ್ತೇವೆ. ನಾವು ನಮ್ಮ ಕುರಾನ್ ಅನುಸರಿಸುತ್ತೇವೆ. ನಾವು ಸರ್ಕಾರದ ಆದೇಶ ಅನುಸರಿಸಬೇಕಾಗಿಲ್ಲ. ಹಿಜಾಬ್ ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಬೇಕು. ಪರೀಕ್ಷೆಗಾಗಿ ನಾವು ಎರಡು ತಿಂಗಳಿಂದ ಮನೆಯಿಂದಲೇ ತಯಾರಿ ನಡೆಸುತ್ತಿದ್ದೇವೆ ಎಂದು ಅಲ್ಮಾಸ್ ಹೇಳಿದರು.
ನಾವು ಕಾಂಪ್ರಮೈಸ್ ಆಗಲ್ಲ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ನಾವು ಹೈಕೋರ್ಟ್ಗೆ ಹಿಜಾಬ್ಗಾಗಿ ಹೋದೆವು. ನಮ್ಮ ನಿರೀಕ್ಷೆ ವಿರುದ್ಧ ತೀರ್ಪು ಬಂದಿದೆ. ಸರ್ಕಾರದ ವಸ್ತ್ರಸಂಹಿತೆ ಆದೇಶವನ್ನು ತೀರ್ಪಲ್ಲೇ ಪ್ರಕಟಿಸಲಾಗಿದೆ. ನಾವು ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆವು ಎಂದರು.
ನಮ್ಮನ್ನು ಬೇರೆ ರೀತಿಯಲ್ಲೇ ನೋಡಲಾಗ್ತಿದೆ..ಕಳೆದ ಎರಡು ತಿಂಗಳು ಸಮಸ್ಯೆ ಅನುಭವಿಸಿದೆವು. ನಮ್ಮನ್ನು ಬೇರೆಯೇ ರೀತಿಯಲ್ಲಿ ನೋಡುತ್ತಿದ್ದಾರೆ. ನಾವು ಡಿಸಿ, ಡಿಡಿಪಿಐ ಭೇಟಿ ಮಾಡಿದರೂ ನ್ಯಾಯ ಸಿಗಲಿಲ್ಲ. ನಾವು ಜಾತ್ಯಾತೀತ ದೇಶದಲ್ಲಿ ಇದ್ದೇವೆ. ಎಲ್ಲಾ ಧರ್ಮಕ್ಕೆ ಎಲ್ಲರೂ ಗೌರವ ಕೊಡಬೇಕು ಎಂದು ಈ ವೇಳೆ ಹೇಳಿದರು.
ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾವು ನಮ್ಮ ವಕೀಲರ ಜೊತೆ ಚರ್ಚೆ ಮಾಡುತ್ತಿದ್ದೇವೆ. ನಾವು ಈಗಾಗಲೇ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಈಗ ಬಂದ ತೀರ್ಪಿನಿಂದ ನಾವು ಬಹಳ ನೊಂದಿದ್ದೇವೆ ಎಂದು ಹಿಜಾಬ್ ಹೋರಾಟಗಾರ್ತಿ ಅಲ್ಮಾಸ್ ಹೇಳಿದ್ದಾರೆ.