ಉಡುಪಿ:ಶ್ರೀಕೃಷ್ಣ ನಗರಿಯಲ್ಲಿ ಆಗಸ್ಟ್ 30 ಮತ್ತು 31ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಆಗಸ್ಟ್ 30 ಅಂದರೆ, ನಾಳೆ ಬೆಳಗ್ಗೆಯಿಂದಲೇ ಶ್ರೀಕೃಷ್ಣ ಭಕ್ತರು ಉಪವಾಸ ಇರುತ್ತಾರೆ. ಅಂದು ರಾತ್ರಿ 12.17ಕ್ಕೆ ಸರಿಯಾಗಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರಧಾನವಾಗಲಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಠದಲ್ಲಿ ಸಕಲ ಸಿದ್ಧತೆ ಆ.31 ರಥಬೀದಿಯಲ್ಲಿ ಶ್ರೀಕೃಷ್ಣನ ಲೀಲೋತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ಸಮಾರಂಭದಲ್ಲಿ ಹಿಂದೆಲ್ಲಾ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ನಿಗದಿತ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಧಾರ್ಮಿಕ ವಿಧಿ-ವಿಧಾನಗಳು ಪ್ರತಿವರ್ಷದಂತೆ ನಡೆಯುತ್ತವೆ ಎಂದು ಪರ್ಯಾಯ ಅದಮಾರು ಮಠ ತಿಳಿಸಿದೆ.
ಈ ಬಾರಿ ಕೃಷ್ಣ ಭಕ್ತರಿಗೆ ವಿತರಣೆ ಮಾಡಲು 40 ಸಾವಿರ ಅಕ್ಕಿಯ ಚಕ್ಕುಲಿಗಳು ಹಾಗೂ 80 ಸಾವಿರ ವಿವಿಧ ಬಗೆಯ ಉಂಡೆಗಳನ್ನು ಮಠದ ಸಿಬ್ಬಂದಿ ತಯಾರಿಸಿದ್ದಾರೆ. ರಥಬೀದಿಯಲ್ಲಿ ಗುರ್ಜಿಗಳನ್ನು ಹಾಕಲಾಗಿದ್ದು, ಗೊಲ್ಲ ವೇಷಧಾರಿಗಳು ಮಡಿಕೆ ಒಡೆಯುವ ಸಂಪ್ರದಾಯವನ್ನು ಮಾಡಲಿದ್ದಾರೆ. ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ರಥಬೀದಿಯಲ್ಲಿ ಉತ್ಸವ ಮಾಡಲಾಗುತ್ತದೆ.
ಕೃಷ್ಣ ಮಠ ಪರ್ಯಾಯ ಅದಮಾರು ಮಠ ಮತ್ತು ಅಷ್ಟ ಮಠಗಳಿಗೆ ಸಂಬಂಧಪಟ್ಟಂತಹ ಸ್ವಾಮೀಜಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಭಕ್ತರಿಗೆ ಕೃಷ್ಣ ಲೀಲೋತ್ಸವ ಕಾರ್ಯಕ್ರಮಕ್ಕೆ ರಥಬೀದಿಗೆ ಪ್ರವೇಶ ಅವಕಾಶ ಇಲ್ಲ ಎಂದು ಜಿಲ್ಲಾಡಳಿತ ಸೂಚನೆ ಹೊರಡಿಸಿದ್ದು, ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂಓದಿ: ನಾಳೆಯಿಂದ ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಸಂಚಾರ: ಒಡಾಟ ಸಮಯ, ದರ ನಿಗದಿ ಹೀಗಿದೆ..