ಉಡುಪಿ :ಹೆರಿಗೆ ವೇಳೆ ಗರ್ಭಿಣಿಯೊಬ್ಬರು ಸಾವನ್ನಪ್ಪಿದ್ದರಿಂದ ರೊಚ್ಚಿಗೆದ್ದ ಕುಟುಂಬಸ್ಥರು ಹಾಸ್ಪಿಟಲ್ ಒಳಗೆ ನುಗ್ಗಲು ಪ್ರಯತ್ನಿಸಿದ ಘಟನೆ ನಗರದ ಬಿ ಆರ್ ಶೆಟ್ಟಿ ಉಚಿತ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟದ ನಿವಾಸಿ ಹೈಸ್ಕೂಲ್ ಶಿಕ್ಷಕಿಯಾಗಿದ್ದ ಉಷಾ ಎಂಬುವರು ಹೆರಿಗೆಗೆಂದು ಸರ್ಕಾರಿ ಸ್ವಾಮ್ಯದಲ್ಲಿರುವ ಉಡುಪಿಯ ಬಿ ಆರ್ ಶೆಟ್ಟಿ ಉಚಿತ ಹೆರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ಆಸ್ಪತ್ರೆಯಲ್ಲಿ ಈಗಾಗಲೇ 11 ಸಾವಿರಕ್ಕೂ ಅಧಿಕ ಉಚಿತ ಹೆರಿಗೆಯಾಗಿವೆ. ಈ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಕುಟುಂಬಸ್ಥರು ಮಹಿಳೆಯನ್ನು ದಾಖಲಿಸಿದ್ದರು.
ಕೆಲ ದಿನಗಳ ಹಿಂದೆ ಸಿಸೇರಿಯನ್ ಅಗತ್ಯವಿಲ್ಲ. ಸಹಜವಾಗಿಯೇ ಹೆರಿಗೆ ನಡೆಸುತ್ತೇವೆ ಎಂದು ವೈದ್ಯರು ಭರವಸೆ ನೀಡಿದ್ದರು. ಆದರೆ, ಹೆರಿಗೆ ಸಮಯ ಬಂದಾಗ ನಮಗೆ ಚಿಕಿತ್ಸೆ ನೀಡುವುದಕ್ಕೆ ಆಗುವುದಿಲ್ಲ. ಮಣಿಪಾಲಕ್ಕೆ ಕೊಂಡೊಯ್ಯಿರಿ ಎಂದು ಹೇಳಿ ಕೈಚೆಲ್ಲಿದ್ದರಂತೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಉಷಾ ಅಸುನೀಗಿದ್ದಾರೆ.
ಕಳೆದ ಮೂರು ದಿನಗಳಿಂದ ಈ ಆಸ್ಪತ್ರೆಯಲ್ಲಿ ನಮ್ಮ ಮಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಾರ್ಮಲ್ ಹೆರಿಗೆ ಸಾಧ್ಯವಿಲ್ಲ ಎಂದಾದರೆ ಸಿಸೇರಿಯನ್ ಮಾಡಬಹುದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕಷ್ಟ ಎಂದು ಮೊದಲೇ ತಿಳಿಸಿದ್ದರೆ ಮಣಿಪಾಲಕ್ಕೆ ಕರೆದುಕೊಂಡು ಹೋಗುತ್ತಿದ್ದೆವು. ಏನನ್ನೂ ಮಾಡದೆ ಇದೀಗ ಶವ ಮನೆಗೆ ಕೊಂಡೊಯ್ಯಬೇಕಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದರು.