ಕರ್ನಾಟಕ

karnataka

ಜನೌಷಧ ಕೇಂದ್ರದಲ್ಲಿ ಪ್ರಧಾನಿಯೊಂದಿಗೆ ಸಂವಾದ: ವೈದ್ಯ ಪದ್ಮನಾಭ ಕಾಮತ್‌ ಶ್ಲಾಘಿಸಿದ ಮೋದಿ

By

Published : Mar 8, 2021, 11:29 AM IST

ಉಡುಪಿಯ ಬ್ರಹ್ಮಾವರದಲ್ಲಿರುವ ಜನೌಷಧ ಕೇಂದ್ರದಲ್ಲಿ ನಡೆದ ಪ್ರಧಾನಿ ಜೊತೆಗಿನ ಸಂವಾದದಲ್ಲಿ ಹೃದ್ರೋಗ ತಜ್ಞ, ಡಾ.ಪದ್ಮನಾಭ ಕಾಮತ್ ಮೋದಿಯವರ ಪ್ರಶಂಸೆಗೆ ಪಾತ್ರರಾದರು. ದಕ್ಷಿಣ ಭಾರತದ ಏಕೈಕ ಕೇಂದ್ರವಾಗಿ ಉಡುಪಿಯಿಂದ ಈ ಸಂವಾದದಲ್ಲಿ ಪಾಲ್ಗೊಳ್ಳಲಾಗಿತ್ತು.

Udupi
ಜನೌಷಧಿ ಕೇಂದ್ರದಲ್ಲಿ ಪ್ರಧಾನಿಯೊಂದಿಗೆ ಸಂವಾದ..

ಉಡುಪಿ:ದೇಶಾದ್ಯಂತ ಇರುವ ಜನೌಷಧ ಕೇಂದ್ರಗಳು ‘ಮೋದಿ ಮೆಡಿಕಲ್’ ಎಂದೇ ಪ್ರಸಿದ್ದವಾಗಿದೆ. ಜನೌಷಧಿ ದಿನಾಚರಣೆ ಪ್ರಯುಕ್ತ ಭಾನುವಾರ ಪ್ರಧಾನಿ ಮೋದಿಯವರು ದೇಶದ ಆಯ್ದ ಜನೌಷಧ ಕಾರ್ಯಕರ್ತರು, ಫಲಾನುಭವಿಗಳು ಹಾಗೂ ವೈದ್ಯರ ಜೊತೆ ಸಂವಾದ ನಡೆಸಿದರು.

ಜನೌಷಧಿ ಕೇಂದ್ರದಲ್ಲಿ ಪ್ರಧಾನಿಯೊಂದಿಗೆ ಸಂವಾದ

ಉಡುಪಿಯ ಬ್ರಹ್ಮಾವರದಲ್ಲಿರುವ ಜನೌಷಧ ಕೇಂದ್ರದಲ್ಲಿ ನಡೆದ ಪ್ರಧಾನಿ ಜೊತೆಗಿನ ಸಂವಾದದಲ್ಲಿ ಪ್ರಸಿದ್ಧ ವೈದ್ಯರೊಬ್ಬರು ಮೋದಿಯವರ ಪ್ರಶಂಸೆಗೆ ಪಾತ್ರರಾದರು. ದಕ್ಷಿಣ ಭಾರತದ ಏಕೈಕ ಕೇಂದ್ರವಾಗಿ ಉಡುಪಿಯಲ್ಲಿ ಈ ಸಂವಾದ ನಡೆಯಿತು.

‘ಜನೌಷಧ - ಜನೋಪಯೋಗಿ’ ಈ ಹೊಸ ಸ್ಲೋಗನ್ ಕೊಟ್ಟವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಪ್ರಸಿದ್ದ ಹೃದ್ರೋಗ ತಜ್ಞ, ಡಾ.ಪದ್ಮನಾಭ ಕಾಮತ್. ಹೌದು ಪ್ರಧಾನಿ ನರೇಂದ್ರ ಮೋದಿಯವರ ಜನೌಷಧ ಕಾನ್ಸೆಪ್ಟ್​ಗೆ ಸಂಪೂರ್ಣ ಬೆಂಬಲ ನೀಡಿದ ಖಾಸಗಿ ವೈದ್ಯ ಡಾ.ಕಾಮತ್. ದೇಶದ ಖಾಸಗಿ ವಲಯದಲ್ಲಿ ಎಲ್ಲಾ ವೈದ್ಯರು ಜನೌಷಧ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸುತ್ತಿದ್ದರೆ, ಈ ವೈದ್ಯರು ಮಾತ್ರ ಬಡ ಮತ್ತು ಮದ್ಯಮ ವರ್ಗದ ರೋಗಿಗಳು ಮಾತ್ರವಲ್ಲ, ಶ್ರೀಮಂತರಿಗೂ ಜನೌಷಧ ಪಡೆಯಲು ಪ್ರೇರಣೆ ನೀಡಿದ್ದರು. ಜನೌಷಧ ಕೇಂದ್ರಗಳಲ್ಲಿ ಇಸಿಜಿ ವ್ಯವಸ್ಥೆ ಆರಂಭಿಸಿ, ಮೋದಿ ಕನಸಿಗೆ ಹೊಸ ರೂಪ ಕೊಟ್ಟಿದ್ದರು. ಈ ವಿಚಾರವನ್ನು ತಿಳಿದ ಪ್ರಧಾನಿಗಳು ನಿನ್ನೆ ಸ್ವತ: ಡಾ. ಕಾಮತ್ ಅವರನ್ನು ಹಾಡಿ ಹೊಗಳಿದರು.

ಉಡುಪಿಯ ಬ್ರಹ್ಮಾವರದ ಜನೌಷಧ ಕೇಂದ್ರ ಈ ಸಂವಾದಕ್ಕೆ ವೇದಿಕೆಯಾಗಿತ್ತು. ಡಾ. ಕಾಮತ್ ಸೇರಿದಂತೆ ದೇಶದ ಆಯ್ದ ನಾಲ್ಕು ಮಂದಿಯ ಜೊತೆಗೆ ಪ್ರಧಾನಿ ಮೋದಿವರು ಸಂವಾದ ನಡೆಸಿದರು. ಬಡವರಿಗೆ ಜನೌಷಧ ತಲುಪಿಸುವ ನನ್ನ ಕನಸನ್ನು ತಾವು ಮತ್ತಷ್ಟು ವಿಸ್ತರಿಸಿದಿರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತನ್ನ ಬಗ್ಗೆ ಬಂದ ಮೆಚ್ಚುಗೆಯ ಮಾತುಗಳಿಂದ ಡಾ.ಕಾಮತ್ ಸಂತಸ ವ್ಯಕ್ತಪಡಿಸಿದರು. ತನ್ನ ‘ಕಾಯಕಲ್ಪ ಟ್ರಸ್ಟ್’ ಮೂಲಕ ಮತ್ತಷ್ಟು ಜನೌಷಧಿ ಕೇಂದ್ರಗಳಿಗೆ ಇಸಿಜಿ ವ್ಯವಸ್ಥೆ ಮಾಡುವ ಕನಸು ಬಿಚ್ಚಿಟ್ಟರು. ಜನೌಷಧಿಯ ಬಗ್ಗೆ ಉಪೇಕ್ಷೆ ಬೇಡ ಎಂದು ಜನರಲ್ಲಿ ಮನವಿ ಮಾಡಿದರು.

ಜನೌಷಧ ಕ್ಷೇತ್ರದಲ್ಲಿ ಉಡುಪಿ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದೆ. ದೇಶದಲ್ಲೇ ಉತ್ಕೃಷ್ಟ ದರ್ಜೆಯ ಜನೌಷಧ ಕೇಂದ್ರಗಳು ಉಡುಪಿಯಲ್ಲಿದೆ. ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಅತಿ ಹೆಚ್ಚು ಗ್ರಾಹಕರನ್ನು ಪಡೆದು ಮುಂಚೂಣಿಯಲ್ಲಿದೆ. ಕರಾವಳಿಯ ಈ ಜಿಲ್ಲೆಯಲ್ಲಿ ಖಾಸಗಿ ವೈದ್ಯರು ಕೂಡಾ ಅತೀ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳನ್ನು ಜನೌಷಧಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ. ಹಾಗಾಗಿ ಸ್ವತ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ, ಉಡುಪಿಯ ಬ್ರಹ್ಮಾವರ ಕೇಂದ್ರದಲ್ಲಿ ಹಾಜರಿದ್ದು ಈ ಸಂವಾದ ನಡೆಸಿಕೊಟ್ಟರು.

ಜನೌಷಧ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ ಇದೀಗ ಪ್ರಧಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಜನೌಷಧ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ 30 ಕ್ಕೂ ಅಧಿಕ ಜನೌಷಧ ಕೇಂದ್ರವನ್ನು ಜಿಲ್ಲೆಯಲ್ಲಿ ಆರಂಭಿಸುವ ಗುರಿ ಹೊಂದಿದೆ.

ABOUT THE AUTHOR

...view details