ಕರ್ನಾಟಕ

karnataka

ETV Bharat / state

ಕಾಲ್ಪನಿಕ ಕತೆ ಹೆಣೆದು ಲಕ್ಷಗಟ್ಟಲೆ ರೂ ವಂಚನೆ: ಸ್ನೇಹಿತರ ವೀಕ್‌ನೆಸ್ ಬಳಸಿ ದೋಖಾ, ಆರೋಪಿ ಅರೆಸ್ಟ್‌ - ಮಣಿಪಾಲ ಅನಂತ ನಗರ

ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಮಣಿಪಾಲ ಅನಂತ ನಗರ ನಿವಾಸಿ ಸ್ವರೂಪ್ ಶೆಟ್ಟಿ(22) ಎಂಬಾತನ್ನು ಪಡುಬಿದ್ರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತ ರೌಡಿಗಳ ಹೆಸರು ಬಳಸಿ, ಕಾಲ್ಪನಿಕ ಕತೆ ಹೆಣೆದು ಅನೇಕರನ್ನು ವಂಚಿಸಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಸ್ವರೂಪ್ ಶೆಟ್ಟಿ ಬಂಧಿತ ಆರೋಪಿ

By

Published : Aug 29, 2019, 5:40 PM IST

ಉಡುಪಿ:ರೌಡಿಗಳ ಹೆಸರು ಬಳಸಿ ಕಾಲ್ಪನಿಕ ಕತೆ ಹೆಣೆದು ಅನೇಕ ಅಮಾಯಕರನ್ನು ವಂಚಿಸಿರುವ ಆರೋಪಿಯನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಮಣಿಪಾಲ ಅನಂತ ನಗರ ನಿವಾಸಿ ಸ್ವರೂಪ್ ಶೆಟ್ಟಿ(22) ಬಂಧಿತ ವ್ಯಕ್ತಿ.

ಜಿಲ್ಲೆಯ ಎಂಜಿಎಂ ಕಾಲೇಜಿನಲ್ಲಿ ಪಿಯುಸಿ ಅನುತ್ತೀರ್ಣನಾಗಿ ಮಣಿಪಾಲದಲ್ಲಿ ಪಾಲಿಟೆಕ್ನಿಕ್ ಶಿಕ್ಷಣ ಪಡೆದ ಈತ ನಿಟ್ಟೆಯಲ್ಲಿ ಬೈಕ್ ಬಾಡಿಗೆ ವ್ಯವಹಾರ ನಡೆಸುತ್ತಿದ್ದ. ಈ ಉದ್ಯಮದಲ್ಲಿ ನಷ್ಟವಾದ್ದರಿಂದ ಸ್ನೇಹಿತ ಪಾದೆಬೆಟ್ಟಿನ ಅಭಿಲಾಷ್ ಎಂಬುವರಿಗೆ ಕಮಿಷನ್ ಆಧಾರದಲ್ಲಿ ಬೈಕ್‌ಗಳನ್ನು ಮಾರಾಟ ಮಾಡಲು ನೀಡಿದ್ದ. ಮಾರಾಟವಾದ ಬಳಿಕ ಕಮಿಷನ್ ಕೊಡದೆ ವಂಚಿಸಿದ್ದರಿಂದ ಸಿಟ್ಟಾದ ಅಭಿಲಾಷ್, ಸ್ನೇಹಿತ ದೀಕ್ಷಿತ್ ಎಂಬಾತನಿಗೆ ವಿಷಯ ತಿಳಿಸಿದ್ದು, ಆತ ಸ್ವರೂಪ್‌ಗೆ ಕರೆ ಮಾಡಿ ನಿನಗೆ ರೌಡಿ ಮಂಜನಲ್ಲಿ ಹೇಳಿ ಬುದ್ಧಿ ಕಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬೆದರಿಕೆ ಕರೆಯನ್ನೇ ಅಸ್ತ್ರವಾಗಿ ಬಳಸಿದ ಸ್ವರೂಪ್, ತನ್ನ ಸಹೋದರಿಯನ್ನು ರೌಡಿ ಮಂಜ ಅಪಹರಿಸಿ 65 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಅಕ್ಕನನ್ನು ಬಿಡಿಸಲು ಕಾರ್ಕಳ ಗ್ರಾಮಾಂತರ ಠಾಣೆ ಎಸ್‌ಐ ಹಾಗೂ ಇನ್ನೊಬ್ಬರು 40 ಲಕ್ಷ ರೂ. ಕೊಟ್ಟಿದ್ದಾರೆ. ಉಳಿದ 25 ಲಕ್ಷ ರೂ. ನಾನು ಹೊಂದಿಸುತ್ತಿದ್ದೇನೆ, ಸದ್ಯದಲ್ಲೇ ನಿನ್ನ ಸಹೋದರನೂ ಅಪಹರಣವಾಗಲಿದ್ದಾನೆ ಎಂದು ಅಭಿಲಾಷ್ ಮೊಬೈಲ್‌ಗೆ ಸಂದೇಶ ರವಾನಿಸಿದ್ದ ಎನ್ನಲಾಗಿದೆ.

ಪೊಲೀಸರ ಹೆಸರಲ್ಲಿ ಲೂಟಿ:
ಕೆಲದಿನದ ಬಳಿಕ ತಾನು ರೌಡಿ ಮಂಜನಿಗೆ ಹಣ ಕೊಟ್ಟು ಸಹೋದರಿಯನ್ನು ಬಿಡಿಸಿಕೊಂಡ ವಿಚಾರ ತಿಳಿಸಿದ್ದ. ಮೇ 8 ರಂದು ಅಭಿಲಾಷ್‌ನ ತಾಯಿಯ ಕಚೇರಿಗೆ ತೆರಳಿದ ಸ್ವರೂಪ್, ಕಾರ್ಕಳ ಎಸ್‌ಐ ತನಗೆ ಕೊಟ್ಟ ಹಣ ವಾಪಸು ಕೇಳುತ್ತಿದ್ದಾರೆ. ನಿಮ್ಮಿಂದಾಗಿ ರೌಡಿ ಮಂಜನಿಗೆ ಹಣ ಕೊಡಬೇಕಾಯಿತು. ನೀವು 35 ಲಕ್ಷ ರೂ. ಕೊಡಬೇಕು. ಇಲ್ಲದಿದ್ದರೆ ನಿಮ್ಮ ಮಗನ ಮೇಲೆ ಕಾರ್ಕಳ ಪೊಲೀಸರು ರೇಪ್ ಮತ್ತು ಕಿಡ್ನ್ಯಾಪ್ ಕೇಸ್ ಹಾಕುತ್ತಾರೆ ಎಂದು ಹೆದರಿಸಿದ್ದ. ಇದರಿಂದ ಹೆದರಿದ ಮಹಿಳೆ 14.57 ಲಕ್ಷ ರೂ.ಗಳನ್ನು ಸ್ವರೂಪ್‌ಗೆ ನೀಡಿದ್ದರು. ಕೆಲದಿನಗಳ ಬಳಿಕ ಲೋಕೋಪಯೋಗಿ ಲೈಸೆನ್ಸ್ ತೆಗೆಸಿಕೊಡುವುದಾಗಿ ಮತ್ತೆ ಅಭಿಲಾಷ್‌ನಿಂದ 4.14 ಲಕ್ಷ ರೂ, ಬಳಿಕ 50 ಸಾವಿರ ರೂ. ಹಣ ಪಡೆದಿದ್ದ ಎಂದು ಆರೋಪಿಸಲಾಗಿದೆ.

ಶವದ ಫೋಟೊ ತೋರಿಸಿ ಬೆದರಿಕೆ:
ಜೂನ್ 25 ರಂದು ಇಂದ್ರಾಳಿ ರೈಲ್ವೆ ಹಳಿಯಲ್ಲಿ ಕಾರ್ಕಳ ಎಸ್‌ಐ ರೌಡಿ ಮಂಜನನ್ನು ಕೊಂದಿದ್ದಾರೆ ಎಂದು ರೈಲ್ವೆ ಹಳಿ ಮೇಲಿರುವ ಮೃತದೇಹದ ಪೋಟೊವನ್ನು ಹೇಮಂತ್ ಪೂಜಾರಿ ಹೆಸರಿನಲ್ಲಿ ಅಭಿಲಾಷ್‌ಗೆ ಸ್ವರೂಪ್ ಶೆಟ್ಟಿ ಕಳುಹಿಸಿದ್ದ. ಬಳಿಕ ಮಂಜನ ಸಾವಿಗೆ ನೀವು ಕಾರಣವಾಗಿದ್ದು, 20 ಲಕ್ಷ ರೂ. ಕೊಡದಿದ್ದರೆ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಹೇಮಂತ್ ಪೂಜಾರಿ ಹೆಸರಲ್ಲಿ ಬೆದರಿಸಿದ್ದ. ಇದರಿಂದ ಹೆದರಿದ ಅಭಿಲಾಷ್ 5.80 ಲಕ್ಷ ರೂ. ನೀಡಿದ್ದರು. ಕೆಲದಿನಗಳ ಬಳಿಕ ಹೇಮಂತ್ ಪೂಜಾರಿ ಹೆಸರಲ್ಲಿ ಸ್ವರೂಪ್ ಶೆಟ್ಟಿಯೇ ನಾಟಕವಾಡಿರುವುದು ತಿಳಿದ ಅಭಿಲಾಷ್ ಪಡುಬಿದ್ರಿ ಠಾಣೆಗೆ ದೂರು ನೀಡಿದ್ದರು.

ಆರೋಪಿ ವಿರುದ್ಧ ಮಣಿಪಾಲ, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪಡುಬಿದ್ರಿ ಪೊಲೀಸರು ಆರೋಪಿಯ 7 ಕೆಟಿಎಂ ಬೈಕ್‌ಗಳನ್ನು ವಶಪಡಿಸಿಕೊಂಡು, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details