ಕರ್ನಾಟಕ

karnataka

ETV Bharat / state

ಜನರ ವಾಯುವಿಹಾರಕ್ಕೆ ಪ್ರಿಯವಾದ ಉಡುಪಿಯ ಸುಸಜ್ಜಿತ ರುದ್ರಭೂಮಿ - Udupi latest news

ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಸರಕಾರಿ ಗುಡ್ಡೆ ಹಿಂದೂ ರುದ್ರಭೂಮಿಯನ್ನು ಜನರು ವಾಯುವಿಹಾರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿನ ಸ್ವಚ್ಛಂದ ಪರಿಸರ ಇದಕ್ಕೆ ಅವಕಾಶ ಕಲ್ಪಿಸಿದೆ. ವಿಶಾಲವಾದ ರುದ್ರಭೂಮಿ 2 ಎಕರೆ 30 ಸೆಂಟ್ಸ್ ಸರ್ಕಾರಿ ಜಾಗದಲ್ಲಿದೆ. ಸಿಸಿ ಕ್ಯಾಮರಾ, ವಿಶಾಲವಾದ ಪಾರ್ಕಿಂಗ್, ಸ್ನಾನ ಗೃಹ, ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ.

udupi
ಉಡುಪಿಯ ಸುಸಜ್ಜಿತ ರುದ್ರಭೂಮಿ

By

Published : May 5, 2021, 7:11 AM IST

Updated : May 6, 2021, 6:30 AM IST

ಉಡುಪಿ: ರುದ್ರಭೂಮಿ ಎಂದರೆ ಜೀವನದ ಕೊನೆಯ ಯಾತ್ರೆ ಮುಗಿಸುವ ಮುಕ್ತಿಧಾಮ ಎನ್ನಲಾಗುತ್ತದೆ. ಸಾಮಾನ್ಯವಾಗಿ ರುದ್ರಭೂಮಿ ಪ್ರದೇಶದಲ್ಲಿ ಕ್ರಿಯಾ ದಿನವನ್ನು ಹೊರತುಪಡಿಸಿ ಉಳಿದ ದಿನ ಜನಸಂಚಾರ ವಿರಳ. ಆದರೆ ಇಲ್ಲೊಂದು ರುದ್ರಭೂಮಿಯಲ್ಲಿ ದಿನನಿತ್ಯ ನೂರಾರು ಜನರು ಬಂದು ವಿಶ್ರಾಂತಿ ಪಡೆಯುತ್ತಾರೆ.

ಉಡುಪಿಯ ಸುಸಜ್ಜಿತ ರುದ್ರಭೂಮಿ

ಅಂತಿಮ‌ಕ್ರಿಯೆ ನಡೆಸುವ ಈ ಪ್ರದೇಶದಲ್ಲಿ ಜನಸಂಖ್ಯೆ ವಿರಳ. ಆದ್ರೆ ಕಟಪಾಡಿ ಸಮೀಪದ ಸರಕಾರಿ ಗುಡ್ಡೆ ಹಿಂದೂ ರುದ್ರಭೂಮಿ ಇದಕ್ಕೆ ತದ್ವಿರುದ್ಧವಾಗಿದೆ. ಸಂಜೆಯಾಗುತ್ತಿದ್ದಂತೆ ಇಲ್ಲಿನ ಜನರು ವಾಯುವಿಹಾರಕ್ಕೆ ಈ ಪ್ರದೇಶವನ್ನು ಆಯ್ದುಕೊಂಡಿದ್ದಾರೆ. ಆರಾಮವಾಗಿ ಕೂತು ಮಾತನಾಡಲು ಆಸನದ ವ್ಯವಸ್ಥೆಗಳಿವೆ. ವಿವಿಧ ಜಾತಿಯ ಹೂವಿನ ಗಿಡಗಳ ಜೊತೆಗೆ ಆಯುರ್ವೇದಿಕ್ ಸಸಿಗಳನ್ನು ಇಲ್ಲಿ ಕಾಣಬಹುದು. ಬಾಯಾರಿಕೆಗೆ ಬರುವಂತಹ ಪಕ್ಷಿಗಳಿಗೆ ಮಡಿಕೆಯಲ್ಲಿ ನೀರು ಇಡಲಾಗಿದೆ.

ವಿಶಾಲವಾದ ರುದ್ರಭೂಮಿ 2 ಎಕರೆ 30 ಸೆಂಟ್ಸ್ ಸರ್ಕಾರಿ ಜಾಗದಲ್ಲಿದೆ. ಸಿಸಿ ಕ್ಯಾಮರಾ, ವಿಶಾಲವಾದ ಪಾರ್ಕಿಂಗ್, ಸ್ನಾನ ಗೃಹ, ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ.

ಕಟಪಾಡಿ ಗ್ರಾಮ ಪಂಚಾಯಿತಿ ಕುಡಿಯುವ ನೀರು ಪೂರೈಕೆ ಮಾಡುವ ಪಂಪ್ ಚಾಲಕ ಮತ್ತು ದಾರಿದೀಪ ನಿರ್ವಹಣೆ ಮಾಡುವ ಉದ್ಯೋಗಿ ಕಿಶೋರ್ ತನ್ನ ಕೆಲಸದ ನಡುವೆಯೂ ರುದ್ರಭೂಮಿಯ ನಿರ್ವಹಣೆ ನಡೆಸುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ರಾವ್ ಇವರ ಜೊತೆಗೂಡಿ ಇಂದು ರುದ್ರಭೂಮಿಯ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.

ರುದ್ರಭೂಮಿ ಸಂಪರ್ಕಿಸಲು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಕಟಪಾಡಿ ಗ್ರಾಮ ಪಂಚಾಯತ್ ವಿವಿಧ ಇಲಾಖೆಯ ಅನುದಾನದ ಜೊತೆಗೆ ದಾನಿಗಳ ಸಹಕಾರದೊಂದಿಗೆ ಹಿಂದೂ ರುದ್ರಭೂಮಿಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗಿದೆ. ಕಿಶೋರ್ ಅವರು ದಾನಿಗಳು ನೀಡಿದ ಆ್ಯಂಬುಲೆನ್ಸ್​ನಲ್ಲಿ ಕಡುಬಡವರಿಗೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಸಾವನ್ನಪ್ಪಿದವರ ದಹನ ಕಾರ್ಯವನ್ನು ಕೂಡ ಮಾಡಿದ್ದಾರೆ.

Last Updated : May 6, 2021, 6:30 AM IST

ABOUT THE AUTHOR

...view details