ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯತ್ತಿದ್ದ ಶ್ರೀಗಳು ಕೋಟಿ ಭಕ್ತರನ್ನು ಅಗಲಿದ್ದಾರೆ. 8 ದಿನಗಳ ಕಾಲ ಮಣಿಪಾಲದ ತಜ್ನ ವೈದ್ಯರ ತಂಡ ಶ್ರೀಗಳ ಚಿಕಿತ್ಸೆಯಲ್ಲಿ ಬಹಳಷ್ಟು ಶ್ರಮಿಸಿತ್ತು. ಆದರೆ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಇಂದು ಬೆಳಗ್ಗೆ ಅವರನ್ನು ಆಸ್ಪತ್ರೆಯಿಂದ ಕೃಷ್ಣ ಮಠಕ್ಕೆ ಕರೆದುಕೊಂಡು ಬರಲಾಗಿತ್ತು. ಇದೀಗ ಕೊನೆಯುಸಿರೆಳೆದಿದ್ದಾರೆ.
ಅಷ್ಟಮಠಗಳಲ್ಲೇ ಹಿರಿಯ ಯತಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ 88 ವರ್ಷ ವಯಸ್ಸಾಗಿತ್ತು. ಉಡುಪಿಯಿಂದ 120ಕಿಲೋಮೀಟರ್ ದೂರವಿರುವ ಸುಭ್ರಮಣ್ಯದ ಸಮೀಪವಿರುವ ರಾಮಕುಂಜದ ಎಂಬ ಹಳ್ಳಿಯಲ್ಲಿ 1931 ಏಪ್ರಿಲ್ 27 ರಂದು ಪೇಜಾವರ ಶ್ರೀ ಜನಿಸಿದ್ರು. ನಾರಾಯಣಾಚಾರ್ಯ ಕಮಲಮ್ಮ ದಂಪತಿಯ ಎರಡನೇ ಪುತ್ರ ಪೇಜಾವರ ಶ್ರೀ ವಿಶ್ವೇಶತೀರ್ಥರು. ಇವರ ಪೂರ್ವಾಶ್ರಮದ ಹೆಸರು ವೆಂಕಟರಮಣ.
ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಶ್ರೀಗಳು ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ ಮಾಡಿದ್ರಂತೆ. ಎಂಟನೇ ವಯಸ್ಸಲ್ಲೇ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ದೀಕ್ಷೆ ಪಡೆದ ಶ್ರೀಗಳು ಪೇಜಾವರ ಮಠದ ಪರಂಪರೆಯ 32ನೇಯ ಯತಿಯಾಗಿ ನೇಮಕಗೊಂಡ್ರು.
ಅಸ್ಪೃಶ್ಯತೆ ವಿರುದ್ದ ಧ್ವನಿ ಎತ್ತುತ್ತಿದ್ದ ಪೇಜಾವರ ಶ್ರೀಗಳು ಗಾಂಧೀಜಿ ವಿಚಾರದಾರೆ ಯನ್ನು ಬಹುವಾಗಿ ಪಾಲಿಸುತ್ತಿದ್ದರು. ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟ ಪೇಜಾವರ ಶ್ರೀಗಳು ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದ್ರು.
ಪೇಜಾವರ ಮಠದ ಆವರಣದಲ್ಲಿ ಗೋವಿಂದ ಎಂಬ ಉದ್ಘಾರದ ಮೂಲಕ ಶ್ರೀಗಳ ವಿಧಿವಶ ಘೋಷಣೆ 1951 ಜನವರಿ 18ರಂದು 21ರ ಹರೆಯದಲ್ಲೇ ಮೊದಲ ಪರ್ಯಾಯ ಪೀಠವೇರಿದ ಪೇಜಾವರ ವಿಶ್ವೇಶ ತೀರ್ಥರುಒಟ್ಟು 5 ಬಾರಿ ಐತಿಹಾಸಿಕ ಪರ್ಯಾಯ ಪೀಠವೇರಿ ಕೃಷ್ಣಪೂಜೆ ನಡೆಸಿದ ಎರಡನೇ ಹಿರಿಯ ಯತಿ ಎಂದು ಖ್ಯಾತಿ ಪಡೆದ್ರು. ಕೃಷ್ಣನನ್ನ ಉಡುಪಿಯಲ್ಲಿ ಪ್ರತಿಷ್ಟಾಪಿಸಿದ ಮಧ್ವಾಚಾರ್ಯರನ್ನು ಬಿಟ್ಟರೆ ಐದು ಬಾರಿ ಪರ್ಯಾಯ ಪೀಠವೇರುವ ಭಾಗ್ಯ ಪೇಜಾವರ ಶ್ರೀಗಳಿಗೆ ಒದಗಿಬಂದಿತ್ತು. ದಲಿತರ ಪರ ಧ್ವನಿ ಎತ್ತಿ ದಲಿತರ ಅಭಿವೃದ್ದಿ ಪರ ಹೋರಾಟ ನಡೆಸಿದ್ದ ಪೇಜಾವರ ಶ್ರ್ರೀ ಅಸ್ಪೃಶ್ಯತೆ ವಿರುದ್ದ ಹೋರಾಟ ನಡೆಸಿದ್ರು.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಪೇಜಾವರ ಶ್ರೀ, ಪ್ರಧಾನಿ ಮೋದಿಯವರೊಂದಿಗೆ ಬಹಳಷ್ಟು ಆತ್ಮೀಯತೆ ಹೊಂದಿದ್ದರು. ಧರ್ಮ ಸಂಸತ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಕರೆಕೊಟ್ಟ ಪೇಜಾವರ ಶ್ರೀಗಳು, ರಾಮಮಂದಿರ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದರು. ಕೃಷ್ಣ ಮಠದಲ್ಲಿ ಎಡೆ ಹಾಗೂ ಮಡೆ ಸ್ನಾನ ನಿಲ್ಲಿಸಿದ್ದ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದ್ದ ಶ್ರೀಗಳು, ದಲಿತ ಕೇರಿಗೆ ಭೇಟಿ ಹಾಗೂ ವಾಸ್ತವ್ಯ ಕೂಡಾ ಮಾಡಿ ದೇಶದ ಗಮನ ಸೆಳೆದಿದ್ದರು. ನಕ್ಸಲ್ ಪ್ರದೇಶದಲ್ಲ ಹೆಲ್ತ್ ಕ್ಯಾಂಪ್ ಕೂಡಾ ನಡೆಸಿ ಹೆಸರು ವಾಸಿಯಾಗಿದ್ದರು. ಭಾರತದ ಮಾಜಿ ಉಪಪ್ರಧಾಣಿ ಅಡ್ವಾಣಿ, ಈಗಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್ ಆಪ್ತರಾಗಿದ್ದ ಶ್ರೀಗಳು. ಉಮಾ ಭಾರತಿ ಇವರ ಶಿಷ್ಯೆಯಾಗಿದ್ದಾರೆ.
ರಾಷ್ಟ್ರದ ಸಂತರಲ್ಲಿ ಪ್ರಭಾವಿ ಹಿರಿಯ ಯತಿಯಾಗಿದ್ದ ಪೇಜಾವರ ಶ್ರೀ ಅಷ್ಟಮಠದಲ್ಲೇ ಹಿರಿಯ ಯತಿ. ಶೀರೂರು ಲಕ್ಷ್ಮೀವರ ತೀರ್ಥ ಸ್ಚಾಮೀಜಿ ಸಾವಿನ ಸಮಯದಲ್ಲಿ ಅಷ್ಟಮಠಕ್ಕೆ ಮಾರ್ಗದರ್ಶಕರಾಗಿದ್ದ ಪೇಜಾವರ ಶ್ರೀ ದಲಿತರಿಗೆ ಧೀಕ್ಷೆ ಕೂಡಾ ನೀಡುತ್ತಿದ್ದರು. ಯೋಗ ಪೂಜೆಯಲ್ಲಿ ತಲ್ಲಿನರಾಗಿರುತ್ತಿದ್ದ ಶ್ರೀಗಳು ವಿರೋಧದ ನಡುವೆನೂ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿ ಮಠದಲ್ಲಿಯೇ ಭಾವೈಕತೆ ಸಾರಿದ್ರು. ಈ ಮೂಲಕ ಅವರು ಸಂಪ್ರದಾಯದಿಂದ ಹೊರ ಬಂದು ಪ್ರಗತಿಪರ ಸ್ವಾಮೀಜಿ ಎಂದು ತೋರಿಸುವ ಪ್ರಯತ್ನವನ್ನ ಮಾಡಿದ್ದರು.
ರಾಮಮಂದಿರ ನಿರ್ಮಾಣ ಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್ ಹಿನ್ನಲೆಯಲ್ಲಿ ಬಹಳಷ್ಟು ಖುಷಿ ಪಟ್ಟಿದ್ದ ಪೇಜಾವರ ಶ್ರೀಗಳು ರಾಮಮಂದಿರ ನಿರ್ಮಾಣದ ಉದ್ದಕ್ಕೂ ನಾನಿರಬೇಕು ಅನ್ನೊ ಕನಸು ಕಂಡಿದ್ರು. ಆದರೆ, ಆಸೆ ಈಡೇರದೇ ವೈಕುಂಠ ಯಾತ್ರೆ ಕೈಗೊಂಡಿದ್ದಾರೆ.