ಉಡುಪಿ : ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಮಕ್ಕಳಿಗೆ ತಿಳುವಳಿಕೆ ಇರುವುದಿಲ್ಲ. ತಮ್ಮ ಪರಂಪರೆಯಿಂದ ಬಂದ ಆಹಾರ ಕ್ರಮವನ್ನು ಬದಲಿಸಬಾರದು. ಸರ್ಕಾರ ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯ ರವಾನಿಸದಂತಾಗುತ್ತದೆ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.
ಮೊಟ್ಟೆ ವಿತರಣೆಗೆ ಪೇಜಾವರ ಶ್ರೀಗಳ ಆಕ್ಷೇಪ ಮೊಟ್ಟೆ ವಿತರಣೆ ಕುರಿತುಪೇಜಾವರ ಅಭಿಪ್ರಾಯ: ನಗರದಲ್ಲಿ ಮಾತನಾಡಿದ ಅವರು, ಮಕ್ಕಳೊಳಗೆ ಮತಬೇಧ ಉಂಟು ಮಾಡಬಾರದು. ಯಾರು ಏನು ಸೇವಿಸುತ್ತಾರೋ ಅದರ ಖರ್ಚು ನೀಡಲಿ. ಶಾಲೆ ಇರುವುದು ಶಿಕ್ಷಣಕ್ಕೋಸರ. ಹೀಗಾಗಿ ಅಲ್ಲಿ ಜೀವನಶೈಲಿಯನ್ನು ಬದಲಿಸುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಶ್ರೀಗಳು ಹೇಳಿದರು.
ಮತಾಂತರ ಹಾವಳಿ ನಿಗ್ರಹಿಸಿ :ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಮಾತನಾಡಿದ ಪೇಜಾವರ ಶ್ರೀಗಳು, ಮತಾಂತರ ಘಟನೆಯಲ್ಲಿ ಮಂಗಳೂರಿನಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರಂತ. ಮತಾಂತರ ಒಂದು ಕುಟುಂಬವನ್ನು ಬಲಿ ತೆಗೆದುಕೊಂಡಿದೆ. ಈ ಹಾವಳಿಯನ್ನು ಕಾನೂನಿನ ಮೂಲಕ ಸರ್ಕಾರ ನಿಗ್ರಹಿಸಬೇಕು ಎಂದು ಆಗ್ರಹಿಸಿದರು.
ಒತ್ತಡದ ಮತಾಂತರ ಸಲ್ಲದು : ಅಲ್ಲದೆ, ಮನಃಪೂರ್ವಕವಾಗಿ ಯಾರಾದರೂ ಮತಾಂತರವಾದರೆ ನಮ್ಮ ಆಕ್ಷೇಪವಿಲ್ಲ. ಆದರೆ ಒತ್ತಡ ಆಮಿಷ, ಬಲವಂತದಿಂದ ಮತಾಂತರ ಮಾಡಿದರೆ ಅದನ್ನು ಸಹಿಸಲಾಗುವುದಿಲ್ಲ. ಇದು ಸಮಾಜ ಒಡೆಯುವ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ವೈಷಮ್ಯ ಸೃಷ್ಟಿಯಾಗುತ್ತದೆ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.