ಉಡುಪಿ:ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ ಭೇಟಿಗೆ ಇಂದಿನಿಂದ ನಿರ್ಬಂಧ ವಿಧಿಸಲಾಗಿದೆ.
ಗಣ್ಯರ ಭೇಟಿ ಹೆಚ್ಚಾದ ಹಿನ್ನೆಲೆ ಚಿಕಿತ್ಸೆಗೆ ಅಡ್ಡಿಯಾಗುತ್ತಿದೆ. ಯಾರ ಭೇಟಿಗೂ ಅವಕಾಶವಿಲ್ಲ ಎಂದು ಕೆಎಂಸಿ ಆಸ್ಪತ್ರೆ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.
ಶ್ರೀಗಳ ಆರೋಗ್ಯ ವಿಚಾರಿಸಲು ಬೆಂಗಳೂರಿನ ಶಾಸಕ ರವಿ ಸುಬ್ರಹ್ಮಣ್ಯ, ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದರು. ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ, ಪುತ್ತಿಗೆ ಯತಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೂಡಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಪೇಜಾವರ ಶ್ರೀಗಳ ದರ್ಶನ ಮಾಡಿದ ತೇಜಸ್ವಿ ಸೂರ್ಯ, ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರದ್ದು ಮಗುವಿನಂಥ ಮುಗ್ಧ ಮನಸ್ಸು. ಸ್ವಾಮೀಜಿ, ಶೀಘ್ರ ಗುಣಮುಖರಾಗುವ ನಂಬಿಕೆ ನಮಗಿದೆ ಎಂದು ಹೇಳಿದರು.
ಸ್ವಾಮೀಜಿ ನಿತ್ಯ ಚಟುವಟಿಕೆಯಿಂದ ಇರುತ್ತಿದ್ದರು. ಅವರು ಎಂದೂ ಹಾಸಿಗೆ ಹಿಡಿದವರಲ್ಲ. ಸ್ವಾಮೀಜಿ ಆದಷ್ಟು ಬೇಗ ಮೊದಲಿನಂತೆ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿ. ರಾಮಮಂದಿರ ನಿರ್ಮಾಣ ಕಾಲದಲ್ಲಿ ಅವರು ಇರಲಿ. ಅವರು ರಾಮಮಂದಿರ ನೋಡುವಂತಾಗಲಿ ಎಂದು ರವಿ ಸುಬ್ರಹ್ಮಣ್ಯ ಹೇಳಿದರು.
ಪೇಜಾವರ ಶ್ರೀಗಳ ಆರೋಗ್ಯ ಯಥಾಸ್ಥಿತಿ ಇದೆ. ಉಸಿರಾಡುತ್ತಿರುವುದನ್ನು ನಾನು ಕಂಡಿದ್ದೇನೆ. ಎಂಆರ್ಐ ರಿಪೋರ್ಟ್ಗೆ ಎಲ್ಲರೂ ಕಾಯುತ್ತಿದ್ದಾರೆ. ಭಗವಂತನ ಅನುಗ್ರಹದಲ್ಲಿ ಚೇತರಿಕೆಯಾಗುವ ನಿರೀಕ್ಷೆಯಿದೆ ಎಂದು ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು.