ಉಡುಪಿ: ದಾರ್ಶನಿಕ ಸಂತ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.
ಈ ಕುರಿತು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಪ್ರತಿಕ್ರಿಯಿಸಿದ್ದು, ಗುರುಗಳಿಗೆ ಪ್ರಶಸ್ತಿ ಬಂದ ವಿಚಾರ ಕೇಳಿ ಸಂತೋಷವಾಗಿದೆ. ಆದರೆ ಗುರುಗಳು ಯಾವುದೇ ಬಗೆಯ ವಿಭೂಷಣವನ್ನು ಬದುಕಿನಲ್ಲಿ ಧರಿಸಿದವರಲ್ಲ. ಸರ್ಕಾರ ಇವತ್ತು ವಿಭೂಷಣವನ್ನು ಸಮರ್ಪಿಸಿದೆ. ಇದರಿಂದ ತುಂಬಾ ಸಂತೋಷವಾಗಿದೆ. ಜೀವಿತಾವಧಿಯಲ್ಲೇ ಬಂದಿದ್ದರೆ ಮತ್ತಷ್ಟು ಸಂತೋಷ ಸಿಗುತ್ತಿತ್ತು. ಶ್ರೀ ಮಠ ಈ ಪ್ರಶಸ್ತಿಯನ್ನು ಸ್ವಾಗತಿಸುತ್ತದೆ. ಗುರುಗಳಿಗೆ ಸಂದ ಪ್ರಶಸ್ತಿ ಸಂತ ಸಮಾಜಕ್ಕೆ ದೊರಕಿದ ಗೌರವ. ಸಂತ ಸಮಾಜದ ಜವಾಬ್ದಾರಿ ಈ ಪ್ರಶಸ್ತಿ ಯಿಂದ ಹೆಚ್ವಿದೆ ಅಂತಾ ಹೇಳಿದ್ದಾರೆ.
ಪೇಜಾವರ ಶ್ರೀಗಳಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥರು ಪೇಜಾವರ ಶ್ರೀಗಳಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ದೊರೆತಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದು, ವಿಶ್ವೇಶ ತೀರ್ಥರು ವಿಶ್ವಬಂಧು ಜಗತ್ತಿನ ದೀನ ದಲಿತರ ಹೃದಯ ಪದ್ಮವನ್ನು ವಿಕಸನ ಮಾಡಿದವರು. ನೊಂದವರ ಮನಸ್ಸಿಗೆ ಸಾಂತ್ವನ ಕೊಟ್ಟವರು. ಬಡಜನರ ಜೀವನಕ್ಕೆ ದಾರಿದೀಪವಾದವರು, ಜೀವನಜ್ಯೋತಿ ತುಂಬಿದವರು. ಬಡವರ, ದಲಿತರ ಹೃದಯಪದ್ಮಕ್ಕೆ ಭೂಷಣ ಪ್ರಾಯರಾದವರು ಜಗತ್ತಿನ ತುಂಬಾ ಮಿಂಚಿನ ಸಂಚಾರ ಮಾಡಿದವರು. ದೇಹದ ದಣಿವು ಲೆಕ್ಕಿಸದೆ ಭಕ್ತರ ನೋವಿಗೆ ಸ್ಪಂದಿಸಿದವರಿಗೆ ನ್ಯಾಯ ದೊರಕಿದೆ. ಅವರಿಗೆ ಪ್ರಶಸ್ತಿ ಬೇಕೋ ಬೇಡವೋ ಗೊತ್ತಿಲ್ಲ. ಮೂರು ಡಾಕ್ಟರೇಟ್ ಪಡೆದರೂ ಹೆಸರಿನ ಜೊತೆ ನಮೂದಿಸಿರಲಿಲ್ಲ. ಹಾಗಾಗಿ ಪ್ರಶಸ್ತಿ ಅಪೇಕ್ಷೆ ಪಟ್ಟವರಲ್ಲ, ಭಗವಂತ ಪದ್ಮ ವಿಭೂಷಣ ಪ್ರಶಸ್ತಿಗೆ ನ್ಯಾಯ ಒದಗಿಸಿಕೊಟ್ಟಂತಾಗಿದ್ದು, ಅವರ ಭಕ್ತರಾದ ನಮಗೆ ಖುಷಿಯಾಗಿದೆ. ಸರ್ಕಾರಕ್ಕೆ ವಿಶೇಷ ಅಭಿನಂದನೆ, ಶ್ರೀಗಳಿಗೆ ಭಾರತ ರತ್ನವೂ ಸಿಗುವಂತಾಗಲಿ ಅಂತಾ ಹೇಳಿದರು.
ದಲಿತರ ಉದ್ಧಾರದಿಂದ ಹಿಡಿದು , ಸಾಕಷ್ಟು ಸಾಮಾಜಿಕ ಹೋರಾಟದಲ್ಲಿ ಭಾಗಿಯಾದ ಶ್ರೀಗಳು ಜಾತಿ ಭೇದ ಮರೆತು ಸಹಾಯ ಹಸ್ತ ಚಾಚಿದವರು. ದಲಿತರ ಕೇರಿ ಪ್ರವೇಶ, ಶ್ರೀ ಕೃಷ್ಣ ಮಠದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ, ವಿವಿಧ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಶ್ರೀಗಳು ಸಾವಿರಾರು ಮಂದಿಗೆ ಧಾರ್ಮಿಕ ಗುರುಗಳಾಗಿದ್ದವರು. ಪ್ರಶಸ್ತಿಯ ಹಿಂದೆ ಹೋಗದ ಶ್ರೀಗಳು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅತೀಯಾದ ಪ್ರೀತಿಯನ್ನು ಹೊಂದಿದ್ದರು. ಪ್ರಧಾನಿ ಹುದ್ದೆ ಸ್ವೀಕರಿಸುವ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಕೂಡಾ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಮಮಂದಿರ ನಿರ್ಮಾಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ರೀಗಳು ತೀರ್ಪು ಬಂದಾಗ ಬಹಳಷ್ಟು ಖುಷಿಪಟ್ಟಿದ್ದರು ಎಂದು ತೀರ್ಥರು ತಿಳಿಸಿದ್ದಾರೆ.