ಮಂಗಳೂರು/ಉಡುಪಿ:ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರ ಪಾರ್ಥಿವ ಶರೀರ ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಶವಾಗಾರದಿಂದ ಅವರ ರಾಜಕೀಯ ಕರ್ಮಭೂಮಿ ಉಡುಪಿಗೆ ರವಾನಿಸಲಾಗಿದೆ.
ಪಾರ್ಥಿವ ಶರೀರವು 9 ಗಂಟೆ ಸುಮಾರಿಗೆ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ತಲುಪಲಿದೆ. ಚರ್ಚ್ನಲ್ಲಿ ಧರ್ಮಗುರುಗಳು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಿದ್ದಾರೆ. ಬಳಿಕ 11 ಗಂಟೆ ಸುಮಾರಿಗೆ ಪಾರ್ಥಿವ ಶರೀರವನ್ನು ಉಡುಪಿ ನಗರದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಕೊಂಡೊಯ್ಯಲಾಗುತ್ತದೆ.
ಅಲ್ಲಿ ಉಡುಪಿ ಜಿಲ್ಲೆಯ ರಾಜಕೀಯ ನಾಯಕರು, ಕಾಂಗ್ರೆಸ್ ಕಾರ್ಯಕರ್ತರು, ಆಸ್ಕರ್ ಅಭಿಮಾನಿಗಳು, ಹಿತೈಷಿಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿ ಪೂರ್ವಾಹ್ನ 11ರಿಂದ ಮಧ್ಯಾಹ್ನ 1.30ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಲ್ಲಿಂದ ಮತ್ತೆ 2.30ರ ಸುಮಾರಿಗೆ ಮಂಗಳೂರಿಗೆ ಪಾರ್ಥಿವ ಶರೀರ ಬರಲಿದ್ದು, 3.30ರಿಂದ 5.30 ವರೆಗೆ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಳಿಕ ಆಸ್ಕರ್ ಫರ್ನಾಂಡೀಸ್ ಪಾರ್ಥಿವ ಶರೀರ ಮತ್ತೆ ಫಾದರ್ ಮುಲ್ಲರ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆಯಾಗಲಿದೆ. ಸೆ.16ರಂದು ಮಧ್ಯಾಹ್ನ 3.30 ಸುಮಾರಿಗೆ ಅವರ ಪಾರ್ಥಿವ ಶರೀರ ಬೆಂಗಳೂರಿನ ಸೈಂಟ್ ಪೆಟ್ರಿಕ್ಸ್ ಚರ್ಚ್ನ ಮಣ್ಣಿನಲ್ಲಿ ಲೀನವಾಗಲಿದೆ.