ಉಡುಪಿ: ವೈರಿಗಳಿಗೂ ಬಾರಬಾರದ ಕಾಯಿಲೆ ಇಡೀ ಜಗತ್ತನ್ನೇ ವ್ಯಾಪಿಸಿ ವಿಶ್ವವನ್ನೇ ದಂಗು ಬಡಿಸಿದೆ. ದೇಶದಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಆಗಿ ಇಡೀ ದೇಶವೇ ಸ್ತಬ್ದವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಕೃಷಿ ಉತ್ಪನ್ನಗಳ ಸಂಗ್ರಹ ಮತ್ತು ಮಾರಾಟ ವಿತರಣೆಯ ಸರಪಳಿ ಕಡಿದು ರೈತರು ಬೆಳೆದ ನಾನಾ ವಿಧದ ಬೆಳೆಗಳೆಲ್ಲ ಮಣ್ಣುಪಾಲು ಆಗುತ್ತಿವೆ. ಈ ನಡುವೆ ಕಾರ್ಕಳ ತಾಲೂಕಿನ ಪಶ್ಚಿಮಘಟ್ಟ ತಪ್ಪಲು ಗ್ರಾಮಗಳಲ್ಲಿ ರುಚಿಕರವಾದ ಅದ್ಬುತ ಪೋಷಕಾಂಶದ ಕಲ್ಲಣಬೆ ನೆಲವೊಡೆದು ಮೇಲೆದ್ದು, ಕಾರ್ಕಳ ಮಾರುಕಟ್ಟೆಗೆ ಸೋಮವಾರ ದಿಢೀರ್ ಲಗ್ಗೆ ಇಟ್ಟಿದೆ.
ಎಂದಿಲ್ಲ ಭಾಗೀರಥಿ ಇಂದ್ಯಾಕೆ ಬಂದೆವ್ವ ಎಂಬ ಜಾನಪದ ಶೈಲಿಯಲ್ಲಿ ಅಣಬೆ ಪ್ರಿಯರು ಕೇಳುವಂತಾಗಿದೆ. ಸಾಮಾನ್ಯವಾಗಿ ಅಣಬೆ ಹುಟ್ಟುವುದೇ ಜೂನ್ ತಿಂಗಳ ಬಳಿಕ.. ಇದು ವಾಡಿಕೆಯೂ ಹೌದು. ಮಳೆಗಾಲ ಆರಂಭವಾಗಿ ನಾಲ್ಕಾರು ಸಿಡಿಲು ಹೊಡೆದ ರಭಸಕ್ಕೆ ನೆಲ ಅದುರಿ ಈ ಅಪೂರ್ವ ತರಕಾರಿ ಹುಟ್ಟಿಕೊಳ್ಳುವುದು ವಾಡಿಕೆ. ಆದರೆ, ಈ ಬಾರಿ ಮಳೆಗಾಲ ಪೂರ್ವ ಮಳೆಗಳು ಮೊನ್ನೆಯಷ್ಟೇ ಆರಂಭವಾಗಿದ್ದು, ಭರ್ಜರಿ ಸಿಡಿಲು ಮಳೆಗೆ ಇನ್ನಷ್ಟೇ ಆರಂಭವಾಗಬೇಕು. ಆದರೂ ಅಣಬೆ ಯಾಕೆ ಈ ಪಾಟಿ ಅಕಾಲಿಕವಾಗಿ ಎದ್ದು ಬಂದಿದೆ ಎನ್ನುವುದು ಯಾರಿಗೂ ಅರ್ಥವಾಗುತ್ತಿಲ್ಲ. ಆದರೆ ಅಣಬೆ ಕಾಡಿನಿಂದ ನಾಡಿಗೆ ಬಂದಿದ್ದು ಅದ್ಯಾವ ಮಾರ್ಗದಿಂದಲೋ ಗೊತ್ತಿಲ್ಲ. ಎಲ್ಲಾ ಅಡೆತಡೆಗಳ ನಡುವೆ ಭೇದಿಸಿಕೊಂಡು ಅಣಬೆ ಪ್ರಿಯರ ಅಡುಗೆ ಮನೆಯೊಳಗೆ ಪ್ರವೇಶ ಪಡೆದಿದೆ.
ಎಲ್ಲ ಬಗೆಯ ಹಣ್ಣು, ತರಕಾರಿ, ಹೂವು ರೈತರು ಬೆಳೆದ ನಾನಾ ವಿಧ ವಸ್ತುಗಳ ಮೂರು ಕಾಸಿಗೂ ಮಾರಾಟವಾಗದೇ ಕೊಳೆಯುತ್ತಿದ್ದರೆ, ಅಣಬೆ ಮಾತ್ರ ತನ್ನ ಹಿಂದಿನ ದರಕ್ಕಿಂತಲೂ ಮಿರಿಯೇ ತನ್ನ ಮೌಲ್ಯದ ಗತ್ತುಗಾರಿಕೆ ಉಳಿಸಿಕೊಂಡಿದೆ.
ಒಂದು ಕೆಜಿ ಅಣಬೆಗೆ 600 ರೂ. ತೂಗುತ್ತಿದ್ದು, ಇದು ಲಾಕ್ಡೌನ್ ಪರಿಣಾಮದಿಂದ ಅಗ್ಗವಾಗುವ ಬದಲು ಇನ್ನಷ್ಟು ತುಟ್ಟಿಯಾಗುವ ಎಲ್ಲ ಲಕ್ಷಣ ತೋರಿದೆ. ಅಣಬೆ ಮೊಬೈಲ್ ಪೋನ್ಗಳ ಮಾರುಕಟ್ಟೆ ಕುದುರಿಸಿ ಕೊಂಡು ಕಾಡಂಚಿನ ನಿವಾಸಿಗಳ ಮೂಲಕ ಕೀಳಲ್ಪಟ್ಟು ಒಂದೆಡೆ ಸೇರಿದರೆ, ಅಣಬೆ ವ್ಯಾಪಾರಸ್ಥರು, ಅಣಬೆ ಇರುವ ಕಡೆಗೆ ಕಾರು ಬೈಕು ಕಳುಹಿಸಿ ರಾಜ ಮಾರ್ಯದೆಯಿಂದ ನಗರ ಕಡೆಗೆ ತರುತ್ತಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಕಳ ಒಂದೇ ಅಣಬೆಗೆ ಬ್ರಾಂಡ್ ಮಾರ್ಕೆಟ್ ಆಗಿದ್ದು, ನಿರ್ದಿಷ್ಟ ಸಮುದಾಯದ ಮಂದಿ ಈ ತರಕಾರಿಗೆ ಗಿರಾಕಿಗಳಾಗಿದ್ದಾರೆ. ಇತ್ತೀಚೆಗೆ ಅಣಬೆಯ ರುಚಿ ಕಂಡ ಇತರರು ಕೂಡಾ ಅಣಬೆಗೆ ವಿಶೇಷ ಕಾಳಜಿ ತೋರುತ್ತಿದ್ದು, ಅಣಬೆಯ ಮಾರುಕಟ್ಟೆ ವಿಸ್ತರಿಸಿ ಕೊಂಡಿದೆ. ಕಾರ್ಕಳ ನಗರದಲ್ಲಿ ವಿಶೇಷ ಬೇಡಿಕೆ ಮತ್ತು ಪ್ರತಿಷ್ಠಿತ ಖಾದ್ಯವಾಗಿದೆ. ಜೊತೆಗೆ ಕಾರ್ಕಳದ ಸಂಬಂಧ ಹೊಂದಿದ ಬೆಂಗಳೂರು, ಮುಂಬಯಿ ಹಾಗೂ ವಿದೇಶಿಗಳಿಗೂ ಈ ಕಲ್ಲಣಬೆ ಅಣಬೆ ತಲುಪುತ್ತಿದೆ.