ಉಡುಪಿ: ಕೋವಿಡ್ ಕಾರಣಕ್ಕೆ ಮಠದಲ್ಲಿ ಈ ಬಾರಿ ಮುದ್ರಾಧಾರಣೆ ನಡೆದಿರಲಿಲ್ಲ. ಮುದ್ರಾಧಾರಣೆ ನಡೆಯದೇ, ಭಕ್ತರಿಗೆ ನೆಮ್ಮದಿಯಿಲ್ಲ. ಹಾಗಾಗಿ ಕೊನೆಗೂ ಪರ್ಯಾಯ ಅದಮಾರು ಮಠದವರು ಇಂದು ತಪ್ತ ಮುದ್ರಾಧಾರಣೆ ಏರ್ಪಡಿಸಿದರು. ಭಕ್ತರು ಸಾವಿರ ಸಂಖ್ಯೆಯಲ್ಲಿ ಬಂದು ತಪ್ತ ಮುದ್ರೆ ಹಾಕಿಸಿಕೊಂಡು ತೃಪ್ತರಾದರು.
ಮಾಧ್ವ ಪರಂಪರೆಯಲ್ಲಿ ತಪ್ತಮುದ್ರಾಧಾರಣೆ ಎಂಬ ವಿಶೇಷ ಆಚರಣೆಯೊಂದು ನಡೆಯುತ್ತೆ. ಅದು ಪ್ರಥಮ ಏಕಾದಶಿಯಂದು ಅಂದರೆ ಮಳೆಗಾಲದಲ್ಲಿ ನಡೆಯುವುದು ಸಂಪ್ರದಾಯ. ಆದರೆ, ಈ ಬಾರಿ ಕೊರೊನಾ ಕಾರಣಕ್ಕೆ ಕೃಷ್ಣಮಠ ಬಂದ್ ಆಗಿತ್ತು. ಅಷ್ಟಮಠಾಧೀಶರು ಮಾತ್ರ ಮುದ್ರೆ ಹಾಕಿಸಿಕೊಂಡು, ಆಚರಣೆಯನ್ನು ಕೊವಿಡ್ ನಿಮಿತ್ತ ಬಂದ್ ಮಾಡಿದ್ದರು. ವರ್ಷಕ್ಕೊಮ್ಮೆ ಮುದ್ರೆ ಹಾಕಿಸಿಕೊಂಡು ತಾವು ಕೃಷ್ಣನ ಭಕ್ತರು ಎಂದು ಅನುಸಂಧಾನ ಮಾಡಿಕೊಳ್ಳುವುದು ಇಲ್ಲಿನ ಸಂಪ್ರದಾಯ. ಹೀಗಾಗಿ ಮುದ್ರಾಧಾರಣೆ ನಡೆಯದೇ ಭಕ್ತರು ಕೊರಗುತ್ತಿದ್ದರು. ಇಂದು ಕೊನೆಗೂ ಪರ್ಯಾಯ ಅದಮಾರು ಮಠದವರು ಇಂದು ರಾಜಾಂಗಣದಲ್ಲಿ ಮುದ್ರಾಧಾರಣೆಗೆ ವ್ಯವಸ್ಥೆ ಮಾಡಿದ್ದರು. ಸಾವಿರಾರು ಭಕ್ತರು ಕೋವಿಡ್ ನಿಯಮಾವಳಿ ಪ್ರಕಾರ ಬಂದು ಮುದ್ರೆ ಹಾಕಿಸಿಕೊಂಡರು. ಹೀಗಾಗಿ ಕೃಷ್ಣಭಕ್ತರಿಗಿದ್ದ ಕೊರಗು ಕೊನೆಗೂ ದೂರವಾಗಿದೆ.