ಉಡುಪಿ:ಹಿಂದೂ ಧರ್ಮದಿಂದ ಮತಾಂತರಗೊಂಡಿರುವಮುಸ್ಲಿಮರು ಹಾಗು ಕ್ರೈಸ್ತರನ್ನು ಘರ್ ವಾಪಸಿ ಮಾಡದೆ ಬೇರೆ ದಾರಿಯಿಲ್ಲ. ಹೀಗೆ ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನೂ ಹಿಂದೂ ಧರ್ಮಕ್ಕೆ ಕರೆತರಬೇಕು. ಚೀನಾ, ಜಪಾನಿಗೆ ಮತಾಂತರಗೊಂಡವರನ್ನು ಭಾರತಕ್ಕೆ ತರಬೇಕು. ಟಿಪ್ಪು ಜಯಂತಿಯಂದೇ ನಾವು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಬೇಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪುವಿನ ಖಡ್ಗದ ಕಾರಣಕ್ಕೆ ಬಹಳಷ್ಟು ಮತಾಂತರಗಳು ನಡೆದಿವೆ. ಅಸಾಧ್ಯ ಎಂಬುದು ಯಾವುದೂ ಇಲ್ಲ. ನಮ್ಮ ಮನೆ ಪಕ್ಕ, ಗ್ರಾಮ, ಊರುಗಳಲ್ಲಿ ಘರ್ ವಾಪಸಿ ಮಾಡಬೇಕು. ನಾವು ದೊಡ್ಡ ಕನಸು ಕಾಣಬೇಕು. ಈ ದೇಶದಲ್ಲಿ ರಾಮ ಮಂದಿರವನ್ನು ಸ್ಥಾಪನೆ ಮಾಡಿದ್ದೇವೆ. ಕಾಶ್ಮೀರದ 370 ಕಾಯ್ದೆಯನ್ನು ತೆಗೆದು ಹಾಕಿದ್ದೇವೆ. ಪಾಕಿಸ್ತಾನದ ಮುಸಲ್ಮಾನರನ್ನು ಹಿಂದೂಗಳಾಗಿ ಪರಿವರ್ತನೆ ಮಾಡಬೇಕು. ಘರ್ ವಾಪಸಿ ಆದ್ಯ ಕರ್ತವ್ಯದ ರೀತಿಯಲ್ಲಿ ನಾವು ಮಾಡಬೇಕಾಗಿದೆ. ಅಖಂಡ ಭಾರತದ ಕಲ್ಪನೆಯಲ್ಲಿ ಪಾಕಿಸ್ತಾನವೂ ಇದೆ. ಮಠ, ದೇವಸ್ಥಾನ ಇದರ ಮುಂದಾಳತ್ವ ವಹಿಸಬೇಕು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಸಂಬಂಧ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಹಿಂದೂ ಧರ್ಮದ ಪುನರುತ್ಥಾನವಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿದೆ ಎಂದರು.
ಭಾರತದ ಮುಸಲ್ಮಾನರು ಯಾರು?:
ಸ್ವಾಮಿ ವಿವೇಕಾನಂದರ ಒಂದು ಮಾತು ನೆನಪಿಸಿಕೊಳ್ಳಬೇಕು. ಓರ್ವ ಹಿಂದೂ ಧರ್ಮವನ್ನು ತೊರೆದರೆ ಕೇವಲ ಒಬ್ಬ ಹಿಂದೂವಿನ ಸಂಖ್ಯೆ ಕಡಿಮೆಯಾಗುವುದಿಲ್ಲ. ಬದಲಾಗಿ ಹಿಂದೂ ಧರ್ಮಕ್ಕೆ ಒಬ್ಬ ಹೊಸ ಶತ್ರು ಹುಟ್ಟಿದಂತೆ ಎಂದು ಅವರು ಹೇಳಿದ್ದರು. ಈ ದೇಶದಲ್ಲಿರುವ ಕ್ರಿಶ್ಚಿಯನ್ನರು, ಮುಸ್ಲಿಮರು ಯಾರು?. ಕೆಲವೇ ವರ್ಷಗಳ ಹಿಂದೆ ಇವರೆಲ್ಲಾ ಹಿಂದೂಗಳಾಗಿದ್ದವರಲ್ಲವೇ?. ಹಿಂದೂ ಧರ್ಮ, ದೇವಸ್ಥಾನ, ಆಚರಣೆಗಳ ಮೇಲೆ ಬೆಂಕಿ ಕಾರುವವರು ಯಾರು?. ಅವರೆಲ್ಲರೂ ಒಂದು ಕಾಲದಲ್ಲಿ ಹಿಂದುಗಳೇ ಆಗಿದ್ದರು. ಭಾರತದ ಮುಸಲ್ಮಾನರು ಯಾರು?. ಇವರೇನು ಅರಬ್, ಸಿರಿಯಾ, ಟರ್ಕಿಯಿಂದ ಬಂದವರೇ? ಇವರೆಲ್ಲಾ ಹೆದರಿಕೆ, ಬೆದರಿಕೆಗೆ ಒಳಗಾಗಿ ಮತಾಂತರಕ್ಕೊಳಗಾದವರು ಎಂದು ವಿವರಿಸಿದರು.
'ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕು':
ಸಂವಿಧಾನದ ಆರಂಭದಲ್ಲಿ ದೇಶಕ್ಕೆ 'ಭಾರತ್' ಶಬ್ದ ಬಳಸಿದ್ದಾರೆ. 1947ರಲ್ಲಿ ಈ ದೇಶ ಹುಟ್ಟಿದ್ದಲ್ಲ. ಸಾವಿರಾರು ವರ್ಷಗಳಿಂದ ಅವಿಚ್ಛಿನ್ನವಾಗಿ ಬದುಕಿರುವ ಹಿಂದೂ ದೇಶವಿದು. ಸಂವಿಧಾನದ ರಚನಾಕಾರರು ಕೂಡಾ ಈ ವಿಚಾರವನ್ನು ಗೌರವಿಸಿದ್ದಾರೆ. ಭಾರತ ಭಾರತವಾಗಿ ಉಳಿಯಬೇಕೆಂದರೆ ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಬೇಕು. ಹಿಂದೂಗಳು ಬಹುಸಂಖ್ಯಾತರಾದರೆ ಮಾತ್ರ ಭಾರತ ಪ್ರಜಾಪ್ರಭುತ್ವವಾಗಿ ಉಳಿಯುತ್ತದೆ. ಹಿಂದೂಗಳು ಬಹುಸಂಖ್ಯಾತರಾಗಿದ್ದರೆ ಮಾತ್ರ ಸಂವಿಧಾನಕ್ಕೆ ಗೌರವ ಸಿಗುತ್ತದೆ. ಈ ಕಾರಣಕ್ಕಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು ಎಂದರು.
'ರಾಹುಲ್ ಗಾಂಧಿಚಿರ ಯೌವನದ ವಿಪಕ್ಷ ನಾಯಕ':
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ತೇಜಸ್ವಿ ಸೂರ್ಯ, ರಾಹುಲ್ ಹಿಂದೂ ಮತ್ತು ಹಿಂದುತ್ವ ಬೇರೆಯೇ ಎಂಬ ವ್ಯಾಖ್ಯಾನ ಕೊಡುತ್ತಿದ್ದಾರೆ. ನಾನು ಹಿಂದೂ, ಮೋದಿ ಹಿಂದುತ್ವವಾದಿ ಎನ್ನುತ್ತಿದ್ದಾರೆ. ದೇಶದಲ್ಲಿ ಹಿಂದೂಗಳನ್ನು ಬಕ್ರ ಮಾಡುವ ಹೊಸ ಸಿದ್ಧಾಂತ ಹೊರಡಿಸಲಾಗಿದೆ. ಆ ಯುವ ನಾಯಕ ಹಿಂದೂ ಅಲ್ಲ. ಹಿಂದೂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಪೂಜಾ ಪಾಠದ ಮಟ್ಟದಲ್ಲಿ ಇದ್ದರೆ ನಾನು ಹಿಂದೂ, ಹಿಂದೂ ಧರ್ಮದ ರಕ್ಷಣೆಗೆ ಖಡ್ಗ ಎತ್ತಿದರೆ ಅದು ಹಿಂದುತ್ವ. ಆತ ಚಿರ ಯೌವನದ ವಿಪಕ್ಷ ನಾಯಕ ಎಂದು ಟಾಂಗ್ ನೀಡಿದರು.
'ಕಲಾಂ ಅವರನ್ನು ಮುಸಲ್ಮಾನ ಸಮುದಾಯ ಒಪ್ಪುವುದಿಲ್ಲ':
ಟಿಪ್ಪು ಜಯಂತಿ ಮಾಡಬೇಕೆಂಬ ಹೋರಾಟ ರಾಜ್ಯದಲ್ಲಿ ಜೋರಾಗಿ ನಡೆಯಿತು. ದೇಶದಲ್ಲಿ ಅಬ್ದುಲ್ ಕಲಾಂ ಜಯಂತಿಗೆ ಯಾಕೆ ಒತ್ತಾಯ ಕೇಳಿ ಬಂದಿಲ್ಲ?. ಮುಸಲ್ಮಾನ ಸಮುದಾಯ ಎಂದಾದರೂ ಸರ್ಕಾರಕ್ಕೆ ಪತ್ರ ಬರೆದಿದೆಯೇ?. ರಸ್ತೆಯಲ್ಲಿ ಬ್ಯಾನರ್ ಬಂಟಿಂಗ್ಸ್ ಹಚ್ಚಿ ಹೋರಾಟ ಮಾಡಿದ್ದಾರಾ?. ಸಂತ ಶಿಶುನಾಳ ಶರೀಫರ ಜಯಂತಿಯನ್ನು ನೀವು ಎಂದಾದರೂ ಕೇಳಿದ್ದೀರಾ?. ಮುಸಲ್ಮಾನರು ಮೂಲಭೂತವಾದಿತನದತ್ತ ಹೋಗುತ್ತಿದ್ದಾರೆ. ಮುಸಲ್ಮಾನರಿಗೆ ಅಬ್ದುಲ್ ಕಲಾಂ ನೈಜ ಮುಸಲ್ಮಾನನೇ ಅಲ್ಲ. ಅಬ್ದುಲ್ ಕಲಾಂ ವಿಶ್ವಶಾಂತಿಗಾಗಿ ಕೆಲಸ ಮಾಡಿದ್ದಾರೆ. ಅಬ್ದುಲ್ ಕಲಾಂ ಭಗವದ್ಗೀತೆಯನ್ನು ಕೊಂಡಾಡುತ್ತಿದ್ದರು. ಈ ಕಾರಣಕ್ಕಾಗಿ ಕಲಾಂ ಅವರನ್ನು ಮುಸಲ್ಮಾನ ಸಮುದಾಯ ಒಪ್ಪುವುದಿಲ್ಲ ಎಂದರು.
ದೇವಸ್ಥಾನ ಒಡೆದ ಕಾರಣಕ್ಕೆ ಟಿಪ್ಪು ಜಯಂತಿ ಆಚರಿಸಲು ಆಸಕ್ತಿ ತೋರಲಾಗುತ್ತಿದೆ. ಟಿಪ್ಪು ಬಲವಂತವಾಗಿ ಲಕ್ಷಾಂತರ ಜನರ ಮತಾಂತರಗೊಳಿಸಿದ. ಇಂತಹ ಟಿಪ್ಪು ಮಾದರಿಯಾಗಲು ಹೇಗೆ ಸಾಧ್ಯ?. ಔರಂಗಜೇಬ್ ಈ ದೇಶದ ಹೀರೋ ಆಗಲು ಹೇಗೆ ಸಾಧ್ಯ?. ಪ್ರಗತಿಪರರು ಇಸ್ಲಾಂ ಧರ್ಮವನ್ನು ಎಂದೂ ಪ್ರಶ್ನಿಸಲ್ಲ ಯಾಕೆ?. ಜಾತ್ಯತೀತ ಪಕ್ಷಗಳು ಹಿಂದೂಗಳಿಗೆ, ದೇಶಕ್ಕೆ ದೊಡ್ಡ ನಷ್ಟ. ದೇಶದಲ್ಲಿ 2015ರ ನಂತರ ಹಿಂದೂ ಪುನರುತ್ಥಾನ ಆಗುತ್ತಿದೆ. ಸಾರ್ವಜನಿಕ ಸ್ಥಳದಲ್ಲಿ ಧೈರ್ಯದಿಂದ ಮಾತನಾಡುವ ಶಕ್ತಿ ನಮಗೆ ಸಿಕ್ಕಿದೆ ಎಂದು ಹೇಳಿದರು.
ಇದನ್ನೂ ಓದಿ:ವಾಜಪೇಯಿ ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ