ಉಡುಪಿ: ಟಿಪ್ಪು ಪಠ್ಯ ಕೈ ಬಿಡುವುದಾಗಿ ಹೇಳಿದ ಸಿಎಂ ಯಡಿಯೂರಪ್ಪನವರ ಹೇಳಿಕೆಯನ್ನು ಸಂಸದೆ ಶೋಭಾ ಕರಂದ್ಲಾಜೆ ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಟಿಪ್ಪು ಒಬ್ಬ ದಾಳಿಕೋರ, ಕರ್ನಾಟಕಕ್ಕೆ ಅನ್ಯಾಯ ಮಾಡಿದವನು, ಹಿಂದೂಗಳನ್ನ ಗುಡ್ಡದಿಂದ ತಳ್ಳಿ ಟಿಪ್ಪು ಡ್ರಾಪ್ ನಿರ್ಮಾಣ ಮಾಡಿದವನು. ಮದಕರಿ ನಾಯಕನ ಕುಟುಂಬ ನಿರ್ವಂಶ ಮಾಡಿದವನು ಎಂದು ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ಟಿಪ್ಪು ಜಯಂತಿ ಬೇಡ ಅಂತ ವಿನಂತಿ ಮಾಡಿದ್ದೀವಿ. ಆದ್ರೆ ಯಡಿಯೂರಪ್ಪ ಸರ್ಕಾರ ತಿಂಗಳೊಳಗೆ ಟಿಪ್ಪು ಜಯಂತಿ ರದ್ದು ಮಾಡಿ ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಟಿಪ್ಪುವಿನ ಚರಿತ್ರೆಯನ್ನು ಯಾಕಾಗಿ ದಾಖಲಿಸಬೇಕು?
ಟಿಪ್ಪುವಿನ ಯಾವುದೇ ದಾಖಲೆ ಪಠ್ಯದಲ್ಲಿ ಇರಬಾರದು ಅನ್ನೋದು ನಮ್ಮ ಅಭಿಪ್ರಾಯ. ಪಠ್ಯದಿಂದ ಟಿಪ್ಪು ವಿಚಾರ ತೆಗೆದು ಹಾಕೋದು ಒಳ್ಳೆಯ ಕ್ರಮ. ಬಹುಸಂಖ್ಯಾತರಿಗೆ ಅನ್ಯಾಯ, ಮತಾಂತರ ಮಾಡಿದ ಟಿಪ್ಪುವಿನ ಪಠ್ಯ ಬೇಡ. ಸಾವಿರಾರು ಜನರನ್ನು ಕೊಂದ ಟಿಪ್ಪುವಿನ ಚರಿತ್ರೆ ನಮ್ಮ ಮಕ್ಕಳು ಓದುವುದು ಬೇಡ. ಟಿಪ್ಪು ಇತಿಹಾಸ ತಿರುಚುವ ಪ್ರಶ್ನೆಯೇ ಇಲ್ಲ. ಟಿಪ್ಪುವನ್ನು ವೈಭವೀಕರಿಸಿ ಸಾಕಷ್ಟು ಪುಸ್ತಕಗಳು ಬಂದಿವೆ. ಟಿಪ್ಪುವನ್ನು ಓದುವವರಿಗೆ ಮಾರ್ಕೆಟ್ ನಲ್ಲಿ, ಲೈಬ್ರೆರಿಯಲ್ಲಿ ಪುಸ್ತಕ ಸಿಗುತ್ತೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಈ ಪುಸ್ತಕ ಓದಿಕೊಳ್ಳಲಿ, ಬೇಕಿದ್ದರೆ ಅವರ ಮಕ್ಕಳು, ಮೊಮ್ಮಕ್ಕಳು, ಮುಂದಿನ ಪೀಳಿಗೆ ಅದನ್ನೇ ಓದಲಿ ಎಂದು ಲೇವಡಿ ಮಾಡಿದರು.