ಉಡುಪಿ:ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಉಡುಪಿಯ ಶ್ರೀಮಂತಿಕೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಪುತ್ತಿಗೆ ಶ್ರೀಗಳು ವಿದೇಶಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸಿ, ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಲಕ್ಷ್ಮಿ ಆರ್.ಹೆಬ್ಬಾಳ್ಕರ್ ಹೇಳಿದರು.
ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪುತ್ತಿಗೆ ಪರ್ಯಾಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವೆ, ಪರ್ಯಾಯ ಕಾರ್ಯಕ್ರಮ ನೋಡಿ ನಿಜಕ್ಕೂ ಬೆರಗಾದೆ. ಉಡುಪಿ ಸಾಂಸ್ಕೃತಿಕವಾಗಿ ಸಾಕಷ್ಟು ಶ್ರೀಮಂತಿಕೆ ಹೊಂದಿದೆ ಎಂದರು.
ದಸರಾ ವೈಭವ ನೆನಪಿಸಿದ ಪರ್ಯಾಯ: ಪರ್ಯಾಯೋತ್ಸವದ ಅಂಗವಾಗಿ ನಡೆದ ಮೆರವಣಿಗೆ ಹಾಗೂ ಕಾರ್ಯಕ್ರಮವನ್ನು ನೋಡಿ ಮೈಸೂರು ದಸರಾ ವೈಭವ ನನಗೆ ನೆನಪಾಯಿತು. ಸಾಂಸ್ಕೃತಿಕವಾಗಿ ಭಾರತ ಸಾಕಷ್ಟು ಶ್ರೀಮಂತವಾಗಿದೆ. ದೇಶ ಸಾಂಸ್ಕೃತಿಕವಾಗಿ ವಿಶ್ವಗುರುವಾಗುವ ಪಥದತ್ತ ಸಾಗುತ್ತಿದೆ ಎಂದು ಸಚಿವೆ ತಿಳಿಸಿದರು.
ಪರ್ಯಾಯಕ್ಕೆ ಸಂಪೂರ್ಣ ಸಹಕಾರ: ಪರ್ಯಾಯೋತ್ಸವಕ್ಕೆ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೆಬ್ಬಾಳ್ಕರ್ ಭರವಸೆ ನೀಡಿದರು. ಮುಂದುವರೆದು ಮಾತನಾಡಿ, ಪರ್ಯಾಯೋತ್ಸವದಲ್ಲಿ ಭಾಗವಹಿಸುವ ಅಪೂರ್ವ ಅವಕಾಶವನ್ನು ಮಿಸ್ ಮಾಡಬಾರದು ಎಂಬ ಕಾರಣಕ್ಕಾಗಿ ಕುಟುಂಬಸಮೇತ ಆಗಮಿಸಿದ್ದೇನೆ. ದೇಶದ ಪ್ರಸಿದ್ಧ ತೀರ್ಥಕ್ಷೇತ್ರವಾದ ಉಡುಪಿ ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ. ಇಂತಹ ಜಿಲ್ಲೆಗೆ ಉಸ್ತುವಾರಿ ಸಚಿವೆಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನ ಪಾಲಿಗೆ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ಶೋಭಾ ಕರಂದ್ಲಾಜೆ ಪರ್ಯಾಯ ಶ್ರೀಕೃಷ್ಣ ಪೂಜಾ ಕೈಂಕರ್ಯ ನೇರವೇರಿಸಲಿರುವ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಕೃಷ್ಣನ ಭಕ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ:'ಜೈ ಶ್ರೀ ರಾಮ್' ಘೋಷಣೆಯೊಂದಿಗೆ ಅಯೋಧ್ಯೆ ದೇಗುಲದ ಗರ್ಭಗುಡಿ ತಲುಪಿದ ರಾಮಲಲ್ಲಾ ಮೂರ್ತಿ