ಕೋಟ(ಉಡುಪಿ):ಕೋಟ ತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲೋನಿಯಲ್ಲಿ ಐದು ದಿನಗಳ ಹಿಂದೆ ಪೊಲೀಸ್ ದೌರ್ಜನ್ಯಕ್ಕೊಳಗಾದ ಕೊರಗ ಕುಟುಂಬವನ್ನು ಶನಿವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿ, ಅವರ ನೋವನ್ನು ಆಲಿಸಿದರು.
ಕೊರಗರ ಕಾಲೋನಿಗೆ ಆಗಮಿಸಿದ್ದ ಗೃಹ ಸಚಿವರು, ಮೆಹಂದಿ ದಿನ ನಡೆದ ಪೂರ್ತಿ ವಿವರಗಳನ್ನು ಕೇಳಿ ತಿಳಿದುಕೊಂಡರು. ಗೃಹ ಸಚಿವರಿಗೆ ಅಂದು ರಾತ್ರಿ ನಡೆದ ದೌರ್ಜನ್ಯದ ವಿವರಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕುಟುಂಬಸ್ಥರು, ನಮಗೆ ಬದುಕುವ ಹಕ್ಕು ಇಲ್ಲವೇ? ಎಂದು ಸಚಿವರ ಬಳಿ ಕೇಳಿ ಅಳಲು ತೋಡಿಕೊಂಡರು. ಗೃಹ ಸಚಿವರ ಜೊತೆಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲಾಧಿಕಾರಿ, ಎಸ್ಪಿ ಮತ್ತು ಸ್ಥಳೀಯ ಮುಖಂಡರು ಇದ್ದರು.
ಪೊಲೀಸ್ ದೌರ್ಜನ್ಯಕ್ಕೊಳಗಾದ ಕೊರಗ ಕುಟುಂಬವನ್ನು ಭೇಟಿ ಮಾಡಿದ ಗೃಹ ಸಚಿವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್ ಲಾಠಿ ಚಾರ್ಜ್ ಪ್ರಕರಣವನ್ನು ಸಿಒಡಿಗೆ ಒಪ್ಪಿಸುತ್ತೇವೆ. ಸಿಐಡಿ ಸಂಸ್ಥೆಯ ಮೂಲಕ ಸಮಗ್ರ ತನಿಖೆ ನಡೆಸುತ್ತೇವೆ. ಪೊಲೀಸ್ ಪ್ರತಿ ದೂರಿನ ಬಗ್ಗೆ ಚರ್ಚೆ ಮಾಡುತ್ತೇವೆ. ಸಂತ್ರಸ್ತ ಸಮುದಾಯಕ್ಕೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕೊರಗ ಕುಟುಂಬದ ಜೊತೆ ಸರ್ಕಾರ ಇದೆ ಎಂಬ ಭರವಸೆ ನೀಡಿದರು.
ಇದನ್ನೂ ಓದಿ:ಸಂತ್ರಸ್ತ ಕೊರಗ ಕುಟುಂಬದ ಮದುವೆಯಲ್ಲಿ ಸಚಿವ ಕೋಟ ಭಾಗಿ
ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದು, 6 ಸಂತ್ರಸ್ತ ಕುಟುಂಬಕ್ಕೆ 50 ಸಾವಿರ ರೂ.ನ ಚೆಕ್ ಹಸ್ತಾಂತರ ಮಾಡಿದರು.