ಉಡುಪಿ:ಪ್ರೀತಿಸಿದ್ದ ಯುವಕ ಮದುವೆಯಾಗಲು ನಿರಾಕರಿಸಿದ್ದರಿಂದ ನೊಂದ ಎಂಬಿಎ ಪದವೀಧರೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ.
ಬ್ರಹ್ಮಾವರ ತಾಲೂಕಿನ ಸಾಯ್ಬರಕಟ್ಟೆ ಸಮೀಪದ ಕಾಜ್ರಳ್ಳಿ ನಿವಾಸಿ ಅನಿಶಾ ಜಿ. ಪೂಜಾರಿ ನೇಣೀಗೆ ಶರಣಾದವಳು. ಅನಿಶಾ ಹಾಗೂ ಚೇತನ್ ಶೆಟ್ಟಿ ಕಳೆದ ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿಯು ಮದುವೆಯ ಹಂತಕ್ಕೆ ಬಂದಾಗ ಚೇತನ್ ಒಪ್ಪಿಲ್ಲ. ಅನಿಶಾ ಪರಿಪರಿಯಾಗಿ ಬೇಡಿದರೂ ಮದುವೆಯಾಗಲು ನಿರಾಕರಿಸಿದ್ದಾನೆ. ಯುವತಿಯು ಪ್ರಿಯಕರನಿಗೆ ಫೋನ್ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರೂ, ಆತ ಕಡೆಗಣಿಸಿದ್ದಾನೆ ಎಂದು ಮನೆಯವರು ದೂರಿದ್ದಾರೆ.
ಚೇತನ್ಗೆ ಮದುವೆ ನಿಶ್ಚಯವಾಗಿದ್ದು, ಛತ್ರ ಬುಕ್ ಮಾಡಲು ಮುಂದಾಗಿದ್ದ ಎಂದು ಯುವತಿಯ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ. ಚೇತನ್ಗೆ ಸಂಬಂಧಪಟ್ಟ ಹಾಡಿಯಲ್ಲೇ ಯುವತಿ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ನಾಲ್ಕು ಪುಟಗಳ ಡೆತ್ನೋಟ್ ಬರೆದಿಟ್ಟಿದ್ದು, ನಂಬಿಸಿ ಮೋಸ ಮಾಡಿರುವ ಬಗ್ಗೆ ಗೆಳತಿಗೆ ಸಂದೇಶಗಳನ್ನು ರವಾನಿಸಿದ್ದಾಳೆ. ಅಲ್ಲದೆ ತನ್ನ ಫೇಸ್ಬುಕ್ ಖಾತೆಯಲ್ಲಿ ಚೇತನ್ ಬಗ್ಗೆ ಬರೆದು ಫೋಟೋ ಅಪ್ಲೋಡ್ ಮಾಡಿದ್ದಾಳೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿಶಾ ಸಾವಿನ ನಂತರ ಚೇತನ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದು, ಬಿಲ್ಲವ ಸಂಘಟನೆ ಮಧ್ಯಪ್ರವೇಶದ ನಂತರ ಎಫ್ಐಆರ್ ದಾಖಲು ಮಾಡಿದ್ದಾರೆ. ಯುವತಿಯ ಆತ್ಮಹತ್ಯೆಗೆ ಚೇತನ್ ಶೆಟ್ಟಿಯ ಪ್ರೇರಣೆಯೇ ಕಾರಣ ಎಂದು ದೂರಲಾಗಿದೆ. ನ್ಯಾಯ ಕೊಡಿಸಿ ಎಂದು ಯುವತಿಯ ಕುಟುಂಬ ಕಣ್ಣೀರಿಡುತ್ತಿದೆ.