ಉಡುಪಿ: ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಜನರ ಮನೆ, ಬದುಕು ಮಣ್ಣುಪಾಲಾಗಿದೆ. ಅದರಂತೆ ಮಟ್ಟು ಎಂಬ ಗ್ರಾಮದಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ತಳಿಯ ಬದನೆಯ ಸಂತಾನವೇ ಉಳಿಯದಂತೆ ಗಿಡಗಳು ನೆರೆಗೆ ತುತ್ತಾಗಿದೆ. ವಿದೇಶದಲ್ಲೂ ಭಾರಿ ಬೇಡಿಕೆ ಇರುವ ಮುಟ್ಟುಗುಳ್ಳ ಗಿಡ ಕೊಳೆತು ರೈತನ ಬದುಕು ದುಃಸ್ಥಿತಿಗೆ ಬಂದಿದೆ.
ಅನಿರೀಕ್ಷಿತವಾಗಿ ಸುರಿದ ಭಾರಿ ಮುಸಲಧಾರೆಯಿಂದ ಕೃಷಿಕರ ಬದುಕಿಗೆ ಕತ್ತಲೆ ಮುಸುಕಿದೆ. ಇನ್ನೇನು ತಿಂಗಳೊಳಗೆ ಕೈಸೇರಲಿದ್ದ ಬೆಳೆಗಳೆಲ್ಲ ಕೊಳೆತು ನಾರುತ್ತಿದೆ. ಕೇವಲ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಮಟ್ಟುಗುಳ್ಳ ಬೆಳೆ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕೊಳೆತು ನಾರುತ್ತಿರುವ ಮಟ್ಟುಗುಳ್ಳ ಬೆಳೆ ಕಟಪಾಡಿ ಸಮೀಪದ ಮಟ್ಟು ಗ್ರಾಮದಲ್ಲಿ ಭತ್ತದ ಬೇಸಾಯ ಮಾಡದೇ ಗದ್ದೆಗಳನ್ನು ಹಡಿಲು ಬಿಟ್ಟು ಒಂದು - ಒಂದೂವರೆ ತಿಂಗಳ ಹಿಂದೆ ಮಟ್ಟುಗುಳ್ಳದ ಸಸಿಗಳನ್ನು ನಾಟಿ ಮಾಡಲಾಗಿತ್ತು. ಮಟ್ಟು ಗ್ರಾಮದ 62 ರೈತರು 40 ಎಕರೆ ಪ್ರದೇಶದಲ್ಲಿ ಈ ಗುಳ್ಳದ ಗಿಡಗಳನ್ನು ಬೆಳೆಸಿದ್ದರು. ಗಿಡಗಳು ಹುಲುಸಾಗಿ ಬೆಳೆದು ಹೂವು ಬಿಡುವುದಕ್ಕೆ ತಯಾರಾಗಿದ್ದವು. ಆದರೆ, ಗ್ರಾಮದಲ್ಲಿ ಹರಿಯುವ ಪಿನಾಕಿನಿ ಹೊಳೆಯ ಭೀಕರ ನೆರೆಯಿಂದಾಗಿ ಗದ್ದೆಗಳಲ್ಲಿ ನೀರು ನಿಂತು ಗಿಡಗಳೇ ಕೊಳೆತು ಹೋಗಿವೆ. ಗಿಡ ಹೇಗಿರುತ್ತೆ ನೋಡೋಣ ಅಂದ್ರೂ ಈ ಗ್ರಾಮದಲ್ಲಿ ಒಂದೇ ಒಂದು ಸಸಿ ಉಳಿದಿಲ್ಲ.
ಮಟ್ಟುಗುಳ್ಳ ಜಿ ಐ ಮಾನ್ಯತೆ ಅಂದರೆ ಪೇಟೆಂಟ್ ಪಡೆದ ಅಪರೂಪದ ಬೆಳೆ. ಮಾನ್ಯತೆ - ಮರ್ಯಾದೆಗಳೇನೇ ಇದ್ದರೂ ಈಗ ಯಾವುದೂ ನೆರವಿಗೆ ಬರುತ್ತಿಲ್ಲ. ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಮಟ್ಟು ಗುಳ್ಳದ ಸಸಿಗಳನ್ನು ನಾಟಿ ಮಾಡಿದರೆ, ಅಕ್ಟೋಬರ್ ಎರಡನೇ ವಾರದಲ್ಲಿ ಗುಳ್ಳ ಕೊಯ್ಲಿಗೆ ಬರುತ್ತಿತ್ತು. ಈ ಬಾರಿ ಗುಳ್ಳದ ಗಿಡಗಳು ಹೂವು ಬಿಟ್ಟು, ಕಾಯಿ ಕಚ್ಚಿ, ಕೊಯ್ಲಿಗೆ ಬರಲು ಇನ್ನು 3-4 ವಾರಗಳಿರುವಾಗಲೇ ನೆರೆಗೆ ತುತ್ತಾಗಿವೆ.
ಮಲ್ಚಿಂಗ್ ಮಾಡಿ ಸಸಿಗಳನ್ನು ನೆಡುವುದರಿಂದ ಎಕರೆಗೆ ಕನಿಷ್ಠ 40ಸಾವಿರ ರೂ.ವರೆಗೆ ವೆಚ್ಚ ಮಾಡಲಾಗಿದೆ. ಗ್ರಾಮದಲ್ಲಿ 15 ಲಕ್ಷ ರೂ.ಗಳಿಗೂ ಅಧಿಕ ವೆಚ್ಚ ಮಾಡಿ ಬೆಳೆಸಿದ ಮಟ್ಟುಗುಳ್ಳ ಬೆಳೆಯೀಗ ನೀರುಪಾಲಾಗಿದೆ. ಸದ್ಯ ಗದ್ದೆಗಳಲ್ಲಿ ನೀರು ನಿಂತು, ಬೆಳೆದಿರುವ ಗಿಡಗಳ ಬೇರುಗಳೆಲ್ಲ ಕೊಳೆತು ಹೋಗಿವೆ. ಇದರಿಂದ ಗಿಡಗಳೂ ಕೊಳೆತರೆ, ಇನ್ನು ಕೆಲವೆಡೆ ಬಾಡಿವೆ. ಇವುಗಳನ್ನೆಲ್ಲ ಕಿತ್ತು ತೆಗೆದು, ಹೊಸ ಸಸಿಗಳನ್ನು ನಾಟಿ ಮಾಡಬೇಕು. ಆದರೆ ಎಲ್ಲ ರೈತರು ನಾಟಿ ಕೆಲಸ ಮುಗಿಸಿದ್ದರಿಂದ ಯಾರಲ್ಲಿಯೂ ಸಸಿಗಳು ತಯಾರಿಲ್ಲ.
ಹೊಸ ಸಸಿಗಳ ತಯಾರಿಗೆ ಇನ್ನೂ ಒಂದು ತಿಂಗಳು ಹಿಡಿಯುತ್ತದೆ. ಬಳಿಕ ಅವುಗಳನ್ನು ನಾಟಿ ಮಾಡಿ ಬೆಳೆ ಬರಲು ಇನ್ನೆರಡು ತಿಂಗಳು ಕಾಯಬೇಕು. ಆದ್ದರಿಂದ ಈ ಬಾರಿ ಮಾರುಕಟ್ಟೆಗೆ ಮಟ್ಟುಗುಳ್ಳ ಬರುವುದು ಇನ್ನೂ ಮೂರು ತಿಂಗಳು ವಿಳಂಬವಾಗಲಿದೆ. ಈ ಸಲ ಕೊರೊನಾದಿಂದಾಗಿ ಪರವೂರಿನಲ್ಲಿರುವವರು ಕೂಡ ಊರಿಗೆ ಬಂದಿದ್ದರಿಂದ ಹೆಚ್ಚಿನ ಕೃಷಿಯಾಗಿತ್ತು. ಆದರೆ, ಬೆಳೆದ ಬೆಳೆ ಕೈಗೆ ಬರುವ ಮೊದಲೇ ಎಲ್ಲ ನಾಶವಾಗಿದೆ.
ಉತ್ತಮ ಫಸಲಿನ ನಿರೀಕ್ಷೆಯಲ್ಲಿ ನೆಟ್ಟಿದ್ದ ಗಿಡಗಳು, ಫಸಲು ಬರುವುದಕ್ಕೆ ಮುನ್ನವೇ ಕಣ್ಣೆದುರು ನಾಶವಾಗಿರುವುದನ್ನು ಕಂಡು ರೈತ ಮರುಗುತ್ತಿದ್ದಾನೆ. ಮಟ್ಟುಗುಳ್ಳದ ಜೊತೆಯಲ್ಲಿ ಹರಿವೆ ಗಿಡಗಳನ್ನೂ ನಾಟಿ ಮಾಡಿದ್ದು, ಅವುಗಳೂ ನಾಶವಾಗಿವೆ. ಬೆಳೆ ಸಂಪೂರ್ಣ ನಾಶವಾಗಿ ಕಂಗಾಲಾಗಿರುವ ರೈತರು ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಸರ್ಕಾರಿ ಲೆಕ್ಜಾಚಾರದ ಪಟ್ಟಿಯಲ್ಲಿ ಈ ಬಿಡಿ ಬೆಳೆಗಾರರು ಪರಿಹಾರ ಪಡೆಯಲು ಅರ್ಹತೆ ಪಡೆದೇ ಇಲ್ಲ ಅನ್ನೋದು ಮಾತ್ರ ದುರಂತ!