ಬೆಂಗಳೂರು/ಉಡುಪಿ: ಮಣಿಪಾಲದ ಶಿಲ್ಪಿ ಡಾ. ಟಿ ಎಮ್ ಎ ಪೈ ಅವರ ಹಿರಿಯ ಪುತ್ರ ಹಾಗೂ ಉದಯವಾಣಿ ಸಂಸ್ಥಾಪಕ ಟಿ ಮೋಹನ್ ದಾಸ್ ಎಂ ಪೈ (89) ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದಾಗಿ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಇವರು ಡಾ ಟಿ ಎಂ ಎ ಪೈ ಫೌಂಡೇಶನ್, ಎಂಜಿಎಂ ಕಾಲೇಜ್ ಟ್ರಸ್ಟ್ನ ಅಧ್ಯಕ್ಷರಾಗಿದ್ದರು. ಮೃತರು ತಮ್ಮಂದಿರಾದ ಡಾಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ತಂಗಿಯರಾದ ವಸಂತಿ ಆರ್. ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ, ಸಹೋದರ ಟಿ.ಸತೀಶ್ ಯು. ಪೈ ಅವರನ್ನು ಅಗಲಿದ್ದಾರೆ. ಎಂಜಿಎಂ ಕಾಲೇಜಿನಲ್ಲಿ ಇಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೋಹನ್ ದಾಸ್ ಪೈ ನಿಧನ ಹಿನ್ನೆಲೆಯಲ್ಲಿ ಇಂದು ಡಾ.ಟಿ ಎಂ ಎ ಪೈ ಫೌಂಡೇಶನ್ನ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹಿರಿಯ ಚೇತನ, ಪ್ರಸಿದ್ಧ ಉದ್ಯಮಿ ಟಿ. ಮೋಹನದಾಸ್ ಪೈ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೋಹನದಾಸ ಪೈ ಅವರ ನಿಧನ ನನಗೆ ಆಘಾತ ಉಂಟು ಮಾಡಿದೆ. ಹಿರಿಯ ಚೇತನರು, ಎಲ್ಲರ ಮಾರ್ಗದರ್ಶಕರಂತಿದ್ದ ಟಿ. ಮೋಹನ್ ದಾಸ್ ಪೈ ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ ಪೈ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಸಿಎಂ ಪ್ರಾರ್ಥಿಸಿದ್ದಾರೆ.
ಸಿದ್ದರಾಮಯ್ಯ ಕಂಬನಿ: ಮೋಹನ ದಾಸ್ ಪೈ ಅವರು ಹಲವಾರು ಸಂಘ-ಸಂಸ್ಥೆಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಅವರ ಅಗಲಿಕೆ ತಮಗೆ ಬಹಳ ನೋವುಂಟು ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸಚಿವ ಅಶ್ವತ್ಥ ನಾರಾಯಣ ಸಂತಾಪ:ಟಿ. ಮೋಹನದಾಸ್ ಪೈ ಅವರ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಸಂತಾಪ ಸೂಚಿಸಿದ್ದಾರೆ. ಟಿಎಂಎ ಪೈ, ಮಣಿಪಾಲ್ ಮೀಡಿಯಾ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳ ಅಧ್ಯಕ್ಷರಾಗಿದ್ದ ಅವರು ದೂರದೃಷ್ಟಿಯ ನಾಯಕರಾಗಿದ್ದರು. ನಾನು ಮಂಗಳೂರಿನಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುವಾಗ ಹತ್ತಿರದಿಂದ ಇವರನ್ನು ಬಲ್ಲೆ. ಒಳ್ಳೆಯ ಉದ್ಯಮಿಯಾಗಿ ಹೆಸರು ಮಾಡಿದ್ದ ಅವರ ಅಗಲಿಕೆಯಿಂದ ಇಡೀ ಸಮಾಜಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.