ಉಡುಪಿ:ಉಡುಪಿಯ ಕೃಷ್ಣಮಠದಲ್ಲಿ ಮಡೆಸ್ನಾನ ಮತ್ತು ಎಡೆಸ್ನಾನ ಎರಡೂ ಸಂಪ್ರದಾಯಗಳಿಗೆ ತಿಲಾಂಜಲಿ ಇಡಲಾಗಿದೆ.
ಉಡುಪಿ ಕೃಷ್ಣಮಠದಲ್ಲಿ ಮಡೆಸ್ನಾನ ಮತ್ತು ಎಡೆಸ್ನಾನಕ್ಕೆ ತಿಲಾಂಜಲಿ..! - ಕೃಷ್ಣಮಠದಲ್ಲಿ ಎಡೆಸ್ನಾನಕ್ಕೆ ವಿದಾಯ ಲೇಟೆಸ್ಟ್ ನ್ಯೂಸ್
ಉಡುಪಿಯ ಕೃಷ್ಣಮಠದಲ್ಲಿ ಮಡೆಸ್ನಾನ ಮತ್ತು ಎಡೆಸ್ನಾನ ಎರಡೂ ಸಂಪ್ರದಾಯಗಳಿಗೆ ವಿದಾಯ ಹಾಡಲಾಗಿದೆ.

ಮಡೆಸ್ನಾನದ ಕುರಿತು ವಿವಾದ ಉಂಟಾದ ಹಿನ್ನೆಲೆಯಲ್ಲಿ ಪರ್ಯಾಯ ಪಲಿಮಾರು ಸ್ವಾಮಿಗಳು ಈ ನಿರ್ಧಾರ ತಳೆದಿದ್ದಾರೆ. ಅನಗತ್ಯ ಗೊಂದಲ ಬೇಡ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ. ಹೀಗಾಗಿ ಎಡೆಸ್ನಾನ ಕೈಗೊಳ್ಳಲು ಬಂದಿದ್ದ ಭಕ್ತರು, ಕೇವಲ ಉರುಳು ಸೇವೆ ನಡೆಸಿ ಪೂಜೆ ಸಲ್ಲಿಸಿದ್ದಾರೆ. ಉಡುಪಿಯ ಕೃಷ್ಣಮಠದಲ್ಲಿ ಎಲ್ಲಾ ಬಗೆಯ ಮಡೆಸ್ನಾನಕ್ಕೆ ಮಂಗಳ ಹಾಡಿದಂತಾಗಿದೆ. ಕಳೆದ ವರ್ಷವೂ ಯಾವುದೇ ಆಚರಣೆ ನಡೆದಿರಲಿಲ್ಲ. ಉಳಿದಂತೆ ಕರಾವಳಿಯ ಕೆಲವು ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಎಡೆಸ್ನಾನ ನಡೆಯಿತು. ಪೇಜಾವರ ಸ್ವಾಮಿಗಳ ಆಡಳಿತ ಇರುವ ಮುಚ್ಚಲಗೋಡು ದೇವಸ್ಥಾನದಲ್ಲಿ ಭೋಜನ ಪ್ರಸಾದದ ಮೇಲೆ ಎಡೆಸ್ನಾನ ನಡೆಸುವವರಿಗೆ ಅವಕಾಶ ನೀಡಲಾಯ್ತು.
ಐದು ವರ್ಷಗಳ ಹಿಂದೆ ಕೃಷ್ಣಮಠ ಸೇರಿದಂತೆ ಉಡುಪಿಯ ಸುಬ್ರಹ್ಮಣ್ಯ ಆಲಯಗಳಲ್ಲಿ ಮಡೆಸ್ನಾನ ನಡೆಸುವ ಸಂಪ್ರದಾಯವಿತ್ತು. ಬ್ರಾಹ್ಮಣರ ಎಂಜಲೆಲೆ ಮೇಲೆ ಉರುಳುಸೇವೆ ನಡೆಸುವ ಈ ಪದ್ಧತಿಗೆ ವಿರೋಧ ವ್ಯಕ್ತವಾಗಿತ್ತು. ಪೇಜಾವರ ಸ್ವಾಮಿಗಳ ಸಲಹೆಯಂತೆ ಎಡೆಸ್ನಾನದ ಹೊಸ ಕಲ್ಪನೆ ಹುಟ್ಟುಹಾಕಲಾಗಿತ್ತು. ದೇವರ ಪ್ರಸಾದವನ್ನು ಗೋವಿಗೆ ತಿನ್ನಿಸಿ ಅದರ ಮೇಲೆ ಉರುಳುಸೇವೆ ನಡೆಸುವ ಎಡೆಸ್ನಾನ ಪದ್ಧತಿ ಕೃಷ್ಣಮಠದಲ್ಲಿ ಚಾಲ್ತಿಗೆ ಬಂತು. ಆದರೆ ಉಣ್ಣುವ ಅನ್ನದ ಮೇಲೆ ಉರುಳುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಲಿಮಾರು ಸ್ವಾಮೀಜಿ ತಮ್ಮ ಪರ್ಯಾಯದ ಅವಧಿಯಲ್ಲಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ.