ಉಡುಪಿ: ಕೊರೊನಾ ಎಲ್ಲಾ ಕ್ಷೇತ್ರಗಳಿಗೂ ದೊಡ್ಡ ಹೊಡೆತ ಕೊಟ್ಟಿದೆ. ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಮಠಗಳಿಗೂ ಸಹ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಾಲಕ್ಕಾಗಿ ಬ್ಯಾಂಕ್ ಮುಂದೆ ನಿಲ್ಲುವಂತಾಗಿದೆ.
ಉಡುಪಿ ಕೃಷ್ಣನಿಗೂ ತಟ್ಟಿದ ಕೊರೊನಾ ಬಿಸಿ: ಆರ್ಥಿಕ ಸಂಕಷ್ಟ ಹಿನ್ನೆಲೆ ಸಾಲದ ಮೊರೆ ಹೋದ ಮಠ! - Krishna Math
ಕೊರೊನಾ ಬಿಸಿಯಿಂದ ಕೃಷ್ಣ ಮಠಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮಠದ ಖರ್ಚು ವೆಚ್ಚ ಸರಿದೂಗಿಸಲು ಶ್ರೀಗಳು ಸಾಲದ ಮೊರೆ ಹೋಗಿದ್ದಾರೆ.
ಕೊರೊನಾ ಹಿನ್ನೆಲೆ ರಾಜ್ಯದ ಪ್ರಸಿದ್ಧ ತೀರ್ಥ ಕ್ಷೇತ್ರವಾಗಿರುವ ಕೃಷ್ಣ ಮಠಕ್ಕೆ ಮಾರ್ಚ್ 22ರಿಂದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಪ್ರವಾಸಿಗರು, ಭಕ್ತಾದಿಗಳು ಬಾರದೆ ಮಠದ ಆದಾಯಕ್ಕೆ ಹೊಡೆತ ಬಿದ್ದಿದೆ. ಹೀಗಿದ್ದರೂ ಸಹ ದೇವಾಲಯದಲ್ಲಿ ನಿತ್ಯದ ಪೂಜೆ, ನೈವೇದ್ಯ, ಮಠದ ಅರ್ಚಕ ವೃಂದ, ವಿದ್ಯಾರ್ಥಿಗಳು, 300 ಜನ ನೌಕರರು, ಗೋಶಾಲೆಯಲ್ಲಿರುವ ಗೋವುಗಳ ಖರ್ಚುಗಳನ್ನು ಮಠ ಭರಿಸಲೇಬೇಕಾಗಿದೆ. ನಿತ್ಯ ಸುಮಾರು 1ರಿಂದ 1.25 ಲಕ್ಷ ಖರ್ಚು ಬರುತ್ತಿದೆ. ತಿಂಗಳಿಗೆ ಸುಮಾರು 30-40 ಲಕ್ಷ ರೂ. ಖರ್ಚಾಗುತ್ತಿದೆ. ಈ ಖರ್ಚು ವೆಚ್ಚದಿಂದ ಹೈರಾಣಾಗಿರುವ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಒಂದು ಕೋಟಿ ರೂಪಾಯಿ ಸಾಲ ಕೊಡುವಂತೆ ಎರಡು ಬ್ಯಾಂಕುಗಳ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಈ ಪೈಕಿ ಒಂದು ಬ್ಯಾಂಕ್ ಈಗಾಗಲೇ 15 ಲಕ್ಷ ರೂಪಾಯಿ ಸಾಲವನ್ನು ನೀಡಿದೆ. ಅದಮಾರು ಮಠಕ್ಕೆ ಸೇರಿದ ಅನೇಕ ವಿದ್ಯಾ ಸಂಸ್ಥೆಗಳು ಇದ್ದರೂ ಕೂಡ ಅಲ್ಲಿನ ದುಡ್ಡನ್ನು ಮಠಕ್ಕೆ ಬಳಸುವುದಿಲ್ಲ ಎಂದು ಶ್ರೀಗಳು ಗಟ್ಟಿಯಾಗಿ ನಿರ್ಧರಿಸಿದ್ದಾರೆ. ಅಲ್ಲಿನ ಲಾಭಾಂಶದ ದುಡ್ಡು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗವಾಗಬೇಕು. ಮಠ ನಡೆಸಲು ಬ್ಯಾಂಕಿನಿಂದ ಸಾಲ ಪಡೆದು ಭಕ್ತರಿಂದ ದೇಣಿಗೆ ಬಂದ ನಂತರ ಅದನ್ನು ಮರು ಪಾವತಿಸುತ್ತೇನೆ ಎಂದು ಈಶಪ್ರಿಯ ಶ್ರೀಗಳು ತಿಳಿಸಿದ್ದಾರೆ.