ಉಡುಪಿ:ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಭಕ್ತರ ಸೇವೆಯಲ್ಲಿದ್ದ ಆನೆ ಇಂದಿರಾ ನಿನ್ನೆ ರಾತ್ರಿ ಮೃತಪಟ್ಟಿದೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಪೀಡಿತವಾಗಿದ್ದ ಇಂದಿರಾ, ನಿನ್ನೆ ಮಧ್ಯಾಹ್ನದ ಹೊತ್ತಿಗೆ ನಿತ್ರಾಣಗೊಂಡು ಕುಸಿದು ಬಿದ್ದಿತ್ತು. ನಂತರ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದ ಆನೆ ರಾತ್ರಿ ವೇಳೆಗೆ ಇಹಲೋಕ ತ್ಯಜಿಸಿದೆ. ತೀವ್ರವಾದ ಜ್ವರ ಮೆದುಳಿಗೆ ಏರಿ ಆನೆ ಮೃತಪಟ್ಟಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.
ಜ್ವರ ಮೆದುಳಿಗೆ ಏರಿ ಮೃತಪಟ್ಟ ಆನೆ ಇಂದಿರಾ ಬಾಳೆ ಹೊನ್ನೂರಿನ ಟಿಂಬರ್ ಮರ್ಚೆಂಟ್ ಮಧು ಎಂಬುವವರು 35 ವರ್ಷದ ಆನೆಯನ್ನು ದೇವಳಕ್ಕೆ ದಾನವಾಗಿ ನೀಡಿದ್ದರು. ಬಹಳಷ್ಟು ಸೌಮ್ಯ ಸ್ವಭಾವದ ಇಂದಿರಾ ಇದುವರೆಗೂ ಯಾವುದೇ ಪುಂಡಾಡಿಕೆ ವರ್ತನೆ ತೋರಿದ್ದಿಲ್ಲ. ಭಕ್ತರ, ದೇವಾಲಯದ ಸಿಬ್ಬಂದಿ ವರ್ಗದ ಪ್ರೀತಿಗೆ ಪಾತ್ರವಾಗಿದ್ದ ಆನೆ ಸಾವಿಗೆ ಸರಿಯಾದ ಚಿಕಿತ್ಸೆ ನೀಡದೇ ಇದ್ದದ್ದೇ ಕಾರಣ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಆನೆಯ ಅಂತ್ಯ ಸಂಸ್ಕಾರ ನಡೆಯಲಿದ್ದು, ಕೊಲ್ಲೂರಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸಲು ವರ್ತಕರು ನಿರ್ಧರಿಸಿದ್ದಾರೆ.