ಕರ್ನಾಟಕ

karnataka

ETV Bharat / state

ಕೃಷ್ಣ ನಗರಿಯಲ್ಲಿ ನೀರಿಗಾಗಿ ಹಾಹಾಕಾರ... ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಮುಂದಾದ ಜಿಲ್ಲಾಡಳಿತ - kannada news

ನೀರಿನ ಸಮಸ್ಯೆ ಎದುರಾಗುವ ಮುನ್ಸೂಚನೆ ಮೊದಲೇ ಗೊತ್ತಿದ್ದರೂ ಸಮರ ಕಾಲೇ ಶಸ್ತ್ರಾಭ್ಯಾಸಹದಂತೆ ನಡೆದುಕೊಳ್ಳುತ್ತಿದೆ ಉಡುಪಿ ಜಿಲ್ಲಾಡಳಿತ.

ಕೃಷ್ಣ ನಗರಿಯಲ್ಲಿ ನೀರಿನ ಸಮಸ್ಯೆ

By

Published : May 8, 2019, 4:07 AM IST

ಉಡುಪಿ : ಅಬ್ಬರಿಸುವ ಸಮುದ್ರ, ನಾಲ್ಕು ಸುತ್ತಲೂ ನೀರು. ಆದರೆ ಬಾಯಾರಿಕೆಯಾದರೆ ಹನಿ ನೀರಿಲ್ಲ. ಇದು ಉಡುಪಿಯ ಸದ್ಯದ ಸ್ಥಿತಿ. ಈ ಬೇಸಿಗೆ, ಕರಾವಳಿಯ ಜನರ ಪಾಲಿಗೆ ತ್ರಿಶಂಕು ಸ್ಥಿತಿ ತಂದೊಡ್ಡಿದೆ. ಯಾವತ್ತೂ ಇಲ್ಲದ ಬರದ ಸ್ಥಿತಿ ಉಡುಪಿಯಲ್ಲಿ ಬಂದಿದೆ ಎನೋ ಅನ್ನಿಸುವಂತಿದೆ.

ಉಡುಪಿ ತಾಲೂಕಿನ ನಗರಸಭಾ ವ್ಯಾಪ್ತಿಯಲ್ಲಿ ಇನ್ನು 15ದಿನಗಳಷ್ಟು ಮಾತ್ರ ನೀರು ಪೂರೈಸಲು ಸಾಧ್ಯ ಅನ್ನೋ ನಗರಸಭೆ ಅಧಿಕಾರಿಗಳ ವರದಿ ಜಿಲ್ಲಾಧಿಕಾರಿಗಳನ್ನ ದಂಗುಬಡಿಸಿದೆ. ನೀರಿನ ಸಮಸ್ಯೆ ಎದುರಾಗುವ ಮುನ್ಸೂಚನೆ ಮೊದಲೇ ಗೊತ್ತಿದ್ದರೂ ಸಮರ ಕಾಲೇ ಶಸ್ತ್ರಾಭ್ಯಾಸಕ್ಕೆ ಜಿಲ್ಲಾಡಳಿತ ತೊಡಗಿದಂತಾಗಿದೆ.

ಇನ್ನು ಗ್ರಾಮಾಂತರ ಪ್ರದೇಶದಲ್ಲಿ ಹೊಳೆಗಳು ಬತ್ತಿ ಹೋಗುತ್ತಿದ್ದು, ಕೆಲ ದಿನಗಳಷ್ಟೆ ಗ್ರಾಮ ಪಂಚಾಯತಿಯ ಅಧಿಕಾರಿಗಳು ನೀರು ಪೂರೈಸಲು ಸಾಧ್ಯ ಎನ್ನುತ್ತಿದ್ದಾರೆ. ಹೀಗಾಗಿ ಗ್ರಾಮ ಹಾಗೂ ನಗರ ನಿವಾಸಿಗಳು ನೀರಿಗಾಗಿ ಬಾಯಿ ಬಡಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ನಗರ ಸಭೆಯ ಆಡಳಿತ ಯಂತ್ರ ಸ್ಥಗಿತಗೊಂಡ ಕಾರಣ ಜನ ಸಾಮಾನ್ಯರ ಸಮಸ್ಯೆ ಕೇಳುವವರಿಲ್ಲ. ಜಿಲ್ಲೆಯಲ್ಲಿ 3-4 ನದಿಗಳಿದ್ದರೂ ಕುಡಿಯಲು ನೀರಿಲ್ಲ.

ಕೃಷ್ಣ ನಗರಿಯಲ್ಲಿ ನೀರಿನ ಸಮಸ್ಯೆ

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ 35 ವಾರ್ಡ್​​ಗಳಲ್ಲಿ 19,200 ಸಾವಿರಕ್ಕಿಂತಲೂ ಅಧಿಕ ನೀರಿನ ಸಂಪರ್ಕವಿದೆ. 10,500 ಕ್ಕೂ ಅಧಿಕ ಮನೆಗಳಿದ್ದು ಈ ಎಲ್ಲ ಮನೆಗಳಿಗೆ ನೀರು ಪೂರೈಕೆ ಮಾಡಲು ಮುಂದಿನ ಒಂದು ತಿಂಗಳು ಮಾತ್ರ ಸಾಧ್ಯ. ನಗರಸಭೆ ಕೆಲ ವಾರ್ಡ್​ಗಳಲ್ಲಿ ಮೂರು ದಿನಗಳಿಗೊಮ್ಮೆ ನೀರು ಕೊಡದೆ ಪ್ರತೀ ದಿನ ನೀರು ಹರಿಯಬಿಡುವುದು ಕೆಲವೆಡೆ ನೀರು ಪೋಲು ಆಗ್ತಿದೆ.

ನಗರಸಭಾ ವ್ಯಾಪ್ತಿಗೆ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಪ್ರಸಕ್ತವಾಗಿ ಬಜೆ ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ಮಟ್ಟ ಕೇವಲ 2.69 ಮೀಟರಷ್ಟೇ. ಕಳೆದ ವರ್ಷ ನಾಲ್ಕು ಮೀಟರಿನಷ್ಟಿದ್ದ ನೀರಿನ ಮಟ್ಟ ಈ ವರ್ಷ ಮೂರಕ್ಕಿಂತ ಕಡಿಮೆಯಾಗಿರೋದು ನಗರಸಭಾ ಅಧಿಕಾರಿಗಳ ಬೇಜವಾಬ್ದಾರಿಯನ್ನ ಎತ್ತಿ ಹಿಡಿದಿದೆ.

ಜಿಲ್ಲಾಧಿಕಾರಿಗಳು ಕೂಡ ನಗರಸಭೆ ನೀರಿನ ಪೂರೈಕೆಯಲ್ಲಿ ಬೇಜವಾಬ್ದಾರಿ ವಹಿಸಿದೆ ಈ ಬಗ್ಗೆ ತನಿಖೆ ಮಾಡುವುದಾಗಿ ಹೇಳಿದ್ದಾರೆ. ಈ ನಡುವೆ ಉಡುಪಿ ನಗರ ಸಭೆಗೆ ಅಧ್ಯಕ್ಷ , ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆದಿಲ್ಲ.ನಗರಸಭೆ ಅಧಿಕಾರಿಗಳೇ ತಮ್ಮ ಇಷ್ಟದಂತೆ ವರ್ತಿಸುತ್ತಿದ್ದು, ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಜನ ಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ಹರಿಹಾಯುತ್ತಿದ್ದಾರೆ.

ABOUT THE AUTHOR

...view details