ಉಡುಪಿ: ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಆ ಹೆಣ್ಣುಮಗಳ ವರ್ತನೆ ನೋಡಿದರೆ ಇಚ್ಛೆಪಟ್ಟು ಹೋಗಿದ್ದಾಳೆ ಎನ್ನುವ ಭಾವನೆ ಬರುತ್ತದೆ. ಹಾಗಾಗಿ ಜಾರಕಿಹೊಳಿಗೆ ಶಿಕ್ಷೆ ಆಗಲಾರದು ಎಂದು ಸಣ್ಣ ನೀರಾವರಿ ಸಚಿವ ಕೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಜಾರಕಿಹೊಳಿ ಸಹೋದರರ ಮಹತ್ವದ ರಾಜಕೀಯ ನಿರ್ಧಾರ ಕುರಿತು ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಗೆ ಸರ್ಕಾರ ಮತ್ತು ಪಕ್ಷದ ಕಡೆಯಿಂದ ಏನೂ ತೊಂದರೆ ಮಾಡಿಲ್ಲ. ಆಕಸ್ಮಿಕವಾದ ಘಟನೆಗೆ ಅವರು ಬಲಿಯಾಗಿದ್ದಾರೆ ಅಷ್ಟೇ. ನಾವೆಲ್ಲ ಅವರ ಬಗ್ಗೆ ಅನುಕಂಪ ಇಟ್ಟುಕೊಂಡಿದ್ದೇವೆ. ಇದೊಂದು ಕಾನೂನಾತ್ಮಕ ಮತ್ತು ನೈತಿಕ ವಿಚಾರ. ನೈತಿಕವಾಗಿ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ. ಕಾನೂನಾತ್ಮಕವಾಗಿ ಸಮಸ್ಯೆ ಇದೆ ಎಂದು ಅನಿಸುತ್ತಿಲ್ಲ. ಎಲ್ಲವನ್ನು ಎದುರಿಸಲೇಬೇಕು, ನ್ಯಾಯಾಲಯದಲ್ಲಿ ಪ್ರಕರಣವಿದ್ದಾಗ ಯಾರನ್ನು ದೂರಲು ಸಾಧ್ಯವಿಲ್ಲ. ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದರು.