ಉಡುಪಿ: ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಅಧ್ಯಾಯ ಫಸ್ಟ್ ಲುಕ್ ರಿಲಿಸ್ ಆಗಿದೆ. ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರುತ್ತಿದ್ದು ಸಿನಿ ಪ್ರಿಯರು ಮತ್ತು ನೆಟಿಜನ್ಸ್ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಫಸ್ಟ್ ಲುಕ್ನಲ್ಲಿ ಅಘೋರಿ ಅವತಾರದಲ್ಲಿ ರಿಷಬ್ ಅಚ್ಚರಿ ಕಾಣಿಸಿಕೊಂಡಿದ್ದು, ಬೇರೊಂದು ಲೋಕಕ್ಕೆ ಕರೆದೊಯ್ಯುವಂತಿದೆ. ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿ ಹಿಡಿದುಕೊಂಡಿರುವ ಪೋಸ್ಟರ್ ಇದಾಗಿದ್ದು, ಶಿವನ ಅವತಾರದ ಮತ್ತೊಂದು ರೂಪ ಎಂದು ನೆಟಿಜನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.
ಉಡುಪಿಯ ಕುಂದಾಪುರ ತಾಲೂಕಿನ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಿತ್ರದ ಮೊದಲ ಅಧ್ಯಾಯಕ್ಕೆ ಇಂದು ಮುಹೂರ್ತ ನಡೆಯಿತು. ಅದಕ್ಕೂ ಮುನ್ನ ಚಿತ್ರತಂಡವು ವಿಶೇಷ ಪೂಜೆ ಸಲ್ಲಿಸಿತಲ್ಲದೇ ಉದ್ಭವಮೂರ್ತಿ ವಿನಾಯಕ ದೇವರಿಗೆ ಮೂಡು ಗಣಪತಿ ಸೇವೆ, ತ್ರಿಕಾಲ ಸೇವೆ, ಅನ್ನದಾನ ನಡೆಸಿತು. ಈ ವಿಶೇಷ ದಿನದ ನಿಮಿತ್ತ ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಕಾಂತಾರ ಚಾಪ್ಟರ್ 1 ಶುರು ಮಾಡಿದ್ದೇವೆ. ಅಧ್ಯಾಯ ಎರಡನ್ನು ನೋಡಿ ನೀವು ದೊಡ್ಡ ಹಿಟ್ ಮಾಡಿದ್ದೀರಿ. ಇದರ ಸಂಪೂರ್ಣ ಸಕ್ಸಸ್ ಅನ್ನು ಕನ್ನಡಿಗರಿಗೆ ಅರ್ಪಿಸಲು ಇಷ್ಟಪಡುವೆ. ಇದರ ಮುಂದುವರಿದ ಪಯಣದಲ್ಲಿ ಮುನ್ನುಡಿ ಅಂದರೆ ಹಿಂದೆ ಏನು ನಡೆಯಿತು ಎನ್ನುವುದನ್ನು ಹೇಳಲು ಹೊರಟಿದ್ದೇನೆ. ಹಿಂದಿನಂತೆ ಈ ಸಿನಿಮಾಕ್ಕೂ ನಿಮ್ಮೆಲ್ಲರ ಹಾರೈಕೆ ಇರಲಿ. ಯಶಸ್ಸನ್ನು ಜವಾಬ್ದಾರಿಯಾಗಿ ತೆಗೆದುಕೊಂಡು ಅದ್ಭುತವಾಗಿ ಕೆಲಸ ಮಾಡಿಕೊಂಡು ಹೋಗುವತ್ತ ಇಡೀ ತಂಡ ಪ್ರಯತ್ನ ಮಾಡುತ್ತಿದೆ ಎಂದು ಮುಹೂರ್ತಕ್ಕೂ ಮುನ್ನ ನಟ ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದ ಬಗ್ಗೆ ಖುಷಿ ಹಂಚಿಕೊಂಡರು.